ಶಾಲಾ ಮಕ್ಕಳಿಗೆ ಛತ್ರಿ ನೀಡಿದ ಸಿದ್ದು ಅಭಿಮಾನಿ!

IMG-20220802-WA0062.jpg
Published on
ದಾವಣಗೆರೆ: ಚಿತ್ರನಟರು ಮಾತ್ರವಲ್ಲ, ನೆಚ್ಚಿನ ರಾಜಕಾರಣಿಗಳಿಗೂ ಅಭಿಮಾನಿಗಳಿದ್ದಾರೆ. ಅವರಲ್ಲಿ ಕೆಲವರು ಜನ್ಮದಿನಕ್ಕೆ ಶುಭ ಕೋರುವ ಫಲಕ, ಬಂಟಿಂಗ್ಸ್‌ಗಳಲ್ಲಿ ಹೆಸರು, ಫೋಟೋ ಹಾಕಿಸಿಕೊಂಡು ಪ್ರಚಾರ ಪಡೆಯುವವರೇ ಹೆಚ್ಚು. ಇಲ್ಲೊಬ್ಬರು ಶಾಲಾ ಮಕ್ಕಳಿಗೆ ಛತ್ರಿಗಳನ್ನು ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ.
ದಾವಣಗೆರೆ ಹೊರವಲಯದ ಹಳೇ ಕುಂದುವಾಡ ಗ್ರಾಮದ, ಮೀನುಗಾರರ ಸಹಕಾರ ಸಂಘದ ನಿರ್ದೇಶಕ, ಸಿದ್ದರಾಮಯ್ಯ ಅವರ ಅಭಿಮಾನಿ ಎಚ್.ಡಿ.ಸಂಪತ್‌ಕುಮಾರ್ ಮಂಗಳವಾರ ಈ ವಿಶೇಷ ಕಾರ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜನ್ಮದಿನದ ಮುನ್ನಾದಿನದಂದು ಗ್ರಾಮದ ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿಯ 348 ಮಕ್ಕಳಿಗೆ ಛತ್ರಿಗಳನ್ನು ನೀಡಿದ್ದಾರೆ. ಎಲ್ಲಿಯೂ ತನ್ನ ಹೆಸರು ಹಾಕಿಕೊಂಡಿಲ್ಲ. ಸಿದ್ದರಾಮಯ್ಯನವರ ಭಾವಚಿತ್ರವನ್ನೂ ಬಳಸಿಲ್ಲ ಎಂಬುದು ವಿಶೇಷ! ‘ಸಿದ್ದರಾಮಯ್ಯ ಈ ನಾಡು ಕಂಡ ಉತ್ತಮ ನಾಯಕ. ಲಕ್ಷಾಂತರ ರೂ. ವೆಚ್ಚ ಮಾಡಿ ಅವರ ಫ್ಲೆಕ್ಸ್, ಬಂಟಿಂಗ್ಸ್ ಮಾಡುವುದು ಸ್ವತಃ ಅವರಿಗೇ ಇಷ್ಟವಿಲ್ಲ. ಮಳೆಗಾಲ ಮತ್ತು ಬಿಸಿಲಲ್ಲಿ ಮಕ್ಕಳು ಶಾಲೆಗೆ ಬರುವುದಿಲ್ಲ ಎಂಬ ದೂರಿತ್ತು. ಹೀಗಾಗಿ ಛತ್ರಿಗಳನ್ನು ಅಭಿಮಾನಿಯಾಗಿ ನೀಡಿದ್ದೇನೆ. ಬುಧವಾರ 9-10ನೇ ತರಗತಿಯ 128 ವಿದ್ಯಾರ್ಥಿಗಳಿಗೂ ಛತ್ರಿಗಳನ್ನು ನೀಡಲಿದ್ದೇನೆ’ ಎಂದು ವಿಜಯವಾಣಿ ಜತೆ ಅನಿಸಿಕೆ ಹಂಚಿಕೊಂಡರು ಸಂಪತ್‌ಕುಮಾರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net