

ಕಲಬುರಗಿ: ನಗರದ ಶಹಾಬಾದ್ ರಸ್ತೆಯಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಬಸ್ ಚಾಲಕ ಅಡ್ಡಾದಿಡ್ಡಿ ಬಸ್ ಚಲಾಯಿಸಿ ಕೆಲ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕೆಲ ಕ್ಷಣ ಆತಂಕ ಸೃಷ್ಟಿಯಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಶಹಾಬಾದ್ ರಸ್ತೆಯಲ್ಲಿದ್ದ ಕಾರು, ಆಟೋ, ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದು, ಬಸ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ವೇಳೆ ಸಿಟ್ಟಿಗೆದ್ದ ಸಾರ್ವಜನಿಕರು ಬಸ್ ಚಾಲಕನನ್ನು ಥಳಿಸಿದ್ದಾರೆ. ನಂತರ ಸಂಚಾರ ಪೊಲೀಸರು ಆರೋಪಿ ಚಾಲಕ ಶಿವಕುಮಾರನನ್ನು ವಶಕ್ಕೆ ಪಡೆದಿದ್ದಾರೆ. ಬಸ್ ನಿಯಂತ್ರಣ ತಪ್ಪಿ ಎರಡು ಕಾರು, ಆಟೋ, ಮೂರು ಬೈಕ್‌ಗಳಿಗೆ ಹಾನಿಯಾಗಿದೆ. ಶಾಲೆ ಬಸ್‌ನ ಮುಂಭಾಗವೂ ಜಖಂಡಗೊAಡಿದೆ. ವಾಹನದಲ್ಲಿ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅಪಘಾತದಿಂದ ವಾಹನ ದಟ್ಟಣೆಯ ಶಹಾಬಾದ್ ರಸ್ತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸಂಚಾರ ಪೊಲೀಸ್ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ.