ಶಾಲಾ ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣ ಅಳವಡಿಸಿ

horatti
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಉತ್ತಮ ವ್ಯಕ್ತಿತ್ವ ನಿರ್ವಣದೊಂದಿಗೆ ಉತ್ತಮ ನಾಗರಿಕರನ್ನು ರೂಪಿಸುವ ನಿಟ್ಟಿನಲ್ಲಿ ಪ್ರಸ್ತುತ ಶಾಲಾ ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣವನ್ನು ಅಳವಡಿಸುವ ಕುರಿತು ಅಗತ್ಯ ಕ್ರಮ ವಹಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಅನ್ಯಾಯ, ಕ್ರೌರ್ಯ, ಅಸಹನೆ, ದುರಾಚಾರ, ಹೊಂದಾಣಿಕೆ ಇಲ್ಲದಿರುವುದು ಹಾಗೂ ಇನ್ನಿತರ ಅಂಶಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಶಿಕ್ಷಣದಲ್ಲಿನ ಮೌಲ್ಯ ಶಿಕ್ಷಣದ ಕೊರತೆಯೇ ಮುಖ್ಯ ಕಾರಣ. ಮಕ್ಕಳು ಒಳ್ಳೆಯ ಆಚಾರ-ವಿಚಾರ, ಉತ್ತಮ ಸಂಸ್ಕಾರವನ್ನು ಅರಿಯಬೇಕಾದರೆ ಮೌಲ್ಯ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.

ನಾವು ಅಭ್ಯಾಸ ಮಾಡುವ ಸಮಯದಲ್ಲಿ ಪಠ್ಯಕ್ರಮದಲ್ಲಿ ನೀತಿ ಕಥೆಗಳಿರುತ್ತಿದ್ದವು. ಅದರಿಂದ ಮಕ್ಕಳು ಪ್ರಾಮಾಣಿಕತೆ, ಸಮಗ್ರತೆ, ಸಹಾನುಭೂತಿ, ದಯೆ, ನ್ಯಾಯಸಮ್ಮತೆ, ತಾಳ್ಮೆ, ಶಿಸ್ತು, ಪರಸ್ಪರ ಹೊಂದಾಣಿಕೆ, ಕಠಿಣ ಪರಿಶ್ರಮ, ಕೃತಜ್ಞತೆ, ಉದಾರತೆ, ಜವಾಬ್ದಾರಿ ತೆಗೆದುಕೊಳ್ಳುವುದು ಈ ಎಲ್ಲ ಅಂಶಗಳನ್ನು ರೂಢಿಸಿಕೊಂಡು ಸಾತ್ವಿಕ ಹಾಗೂ ಆದರ್ಶ ಜೀವನವನ್ನು ನಡೆಸುತ್ತಿದ್ದರು. ಆದರೆ ಈಗಿನ ಮಕ್ಕಳಲ್ಲಿ ಇಂಥ ಗುಣಗಳು ಕಾಣಸಿಗುವುದಿಲ್ಲ. ಮೌಲ್ಯ ಶಿಕ್ಷಣದ ಕೊರತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೇ ಇದಕ್ಕೆ ಮುಖ್ಯ ಕಾರಣ ಎಂದು ವಿವರಿಸಿದ್ದಾರೆ.

ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ನಾಡಿನ ಮುಂದಿನ ಭವಿಷ್ಯ ಅಡಗಿರುತ್ತದೆ. ಇಂದಿನ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳು ವ್ಯಸನ ಮುಕ್ತರಾಗಲು ವಿಧಾನ ಪರಿಷತ್​ನಲ್ಲಿ ಅನೇಕ ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ವಿಧಾನ ಪರಿಷತ್ತಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ತೆಗೆದುಕೊಂಡ ನಿರ್ಣಯಗಳು ಐತಿಹಾಸಿಕವಾಗಿರುತ್ತವೆ ಎಂದು ಹೇಳಿದ್ದಾರೆ.

ಆನ್​ಲೈನ್ ಮೂಲಕ ಶಿಕ್ಷಣ ಸರಿಯಾದ ಪದ್ದತಿ ಅಲ್ಲ, ಎಲ್​ಕೆಜಿ ಯಿಂದ ಪಿಯುಸಿವರೆಗೆ ಆನ್​ಲೈನ್ ಶಿಕ್ಷಣವನ್ನು ರದ್ದುಗೊಳಿಸುವ ಕುರಿತು ಜೂ. 13ರಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಚೈಲ್ಡ್ ಫಂಡ್ ಇಂಡಿಯಾ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕದ ಮಕ್ಕಳ ಆನ್​ಲೈನ್ ಅಪಾಯಗಳ ಕುರಿತ ವಿಶೇಷ ಅಧ್ಯಯನದ ವರದಿಯ ಬಿಡುಗಡೆ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಹೊರಟ್ಟಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net