ಶಾಲಾ ಜಾಗ ಕಬಳಿಕೆಗೆ ಯತ್ನ: ಬೋಗಾದಿ ಗ್ರಾಮಸ್ಥರ ಪ್ರತಿಭಟನೆ

mysore
Published on

ಮೈಸೂರು: ಶಾಲೆಗಾಗಿ ಮಂಜೂರಾಗಿದ್ದ ಭೂಮಿಯನ್ನು ಕೆಲವರು ಕಾನೂನುಬಾಹಿರವಾಗಿ ಸ್ವಂತಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬೋಗಾದಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಬೋಗಾದಿಯ ಹರಿಗಿರಿ ಸೇವಾ ಪ್ರತಿಷ್ಠಾನದ ಬಳಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಭೂಮಿಯನ್ನು ಸಾರ್ವಜನಿಕ ಉದ್ದೇಶವಲ್ಲದೆ ಬೇರೆ ಉದ್ದೇಶಕ್ಕೆ ಬಳಸದಂತೆ ಒತ್ತಾಯಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗ್ಯಾರೇಜ್ ರವಿ ಮಾತನಾಡಿ, ಬೋಗಾದಿ ಗ್ರಾಮದಲ್ಲಿನ ಸರ್ವೇ ನಂ.32 ವಿವಾದಿತ ಜಾಗ 1997-1998ರಲ್ಲಿ ಶಾಲೆ ನಿರ್ಮಾಣ ಮಾಡುವ ಉದ್ದೇಶಕ್ಕೆ ಮೀಸಲಿಡಲಾಗಿದ್ದು, ಹರಿಗಿರಿ ಸೇವಾ ಪ್ರತಿಷ್ಠಾನಕ್ಕೆ ಸರ್ಕಾರದಿಂದ 25 ಗುಂಟೆ ಜಾಗ ಮಂಜೂರಾಗಿದೆ. ಆದರೆ ಪ್ರಸ್ತುತ ವ್ಯಕ್ತಿಯೊಬ್ಬರು ಈ ಜಾಗವನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದು ದೂರಿದರು.

ಫೆ.4ರಂದು ತಹಸೀಲ್ದಾರ್ ಮಹೇಶ್, ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ಶಾಂತಿ ಸಭೆ ನಡೆದು ಭೂಮಿಯನ್ನು ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಲಾಗಿತ್ತು. ಆದಾಗ್ಯೂ, ಏಕಾಏಕಿ ಜೆಸಿಬಿ ಬಳಸಿ ಜಾಗದಲ್ಲಿದ್ದ ಒಂದು ಪಾಳು ಮನೆಯನ್ನು ತೆರವುಗೊಳಿಸಿದ್ದಲ್ಲದೆ, ಸ್ವಚ್ಛತಾ ಕಾರ್ಯ ನಡೆಸಿ ಜಾಗ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರಿ ಜಾಗ ಸಾರ್ವಜನಿಕ ಉದ್ದೇಶಕಷ್ಟೇ ಬಳಕೆಯಾಗಬೇಕು. ಅನಧಿಕೃತ ವ್ಯಕ್ತಿಯ ಪಾಲಾಗಬಾರದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.

ಅರುಣ, ದೊಡ್ಲಿಂಗನ ರವಿ, ಪೈಲ್ವಾನ್ ಕೃಷ್ಣ, ತ್ಯಾಗು, ಕಿರಣ್ ಕುಮಾರ್, ಭರತ್, ಕಾಂತರಾಜು, ರಘು, ಹಾಲಿನ ರೇವಣ್ಣ, ಶಶಿ, ಈಶ್ವರ್, ವಸಂತ್, ಪ್ರೇಮಸಾಗರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net