ಶಾಲಾ-ಕಾಲೇಜುಗಳಲ್ಲಿ ‘ಆಪ್ತ ಗೆಳತಿ’

22rajesh1
Published on

ಚಾಮರಾಜನಗರ: ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಆಪ್ತ ಗೆಳತಿಯೊಬ್ಬರು ಬರಲಿದ್ದಾರೆ, ವಿದ್ಯಾರ್ಥಿನಿಯರು ಹಾಗೂ ನೊಂದ ಮನಸ್ಸುಗಳ ಸಮಸ್ಯೆಗಳಿಗೆ ಕಿವಿಯಾಗಲಿದ್ದಾರೆ.

ಜಿಲ್ಲೆಯ ಪೊಲೀಸ್ ಇಲಾಖೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಹೆಚ್ಚಾಗುತ್ತಲೇ ಇರುವ ದೌರ್ಜನ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ‘ಆಪ್ತ ಗೆಳತಿ’ ಎಂಬ ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಜಿಲ್ಲಾ ಪೊಲೀಸ್ ಇಲಾಖೆ ಶಾಲಾ, ಕಾಲೇಜುಗಳಲ್ಲಿ ಸ್ಥಾಪಿಸಲು ಮುಂದಾಗಿರುವ ದೂರು ಪೆಟ್ಟಿಗೆಗೆ ಆಪ್ತ ಗೆಳತಿ ಎಂದು ಹೆಸರಿಡಲಾಗಿದೆ. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಈ ಪೆಟ್ಟಿಗೆಗಳನ್ನು ತೂಗುಹಾಕಲಾಗುತ್ತದೆ. ಪ್ರತಿ ಶನಿವಾರ ಈ ದೂರು ಪೆಟ್ಟಿಗೆಯನ್ನು ತೆರೆಯಲಾಗುತ್ತದೆ. ಆಯಾ ಶಾಲೆಯಲ್ಲಿ ಇರುವ ಸಮನ್ವಯ ಅಧಿಕಾರಿಯ ಮುಂದೆ ದೂರು ಪೆಟ್ಟಿಗೆ ತೆರೆದು, ದೂರು ಅರ್ಜಿಯ ಸಂಖ್ಯೆಯನ್ನಷ್ಟೇ ನಮೂದಿಸಲಾಗುತ್ತದೆ. ಬಳಿಕ ಪೊಲೀಸರು ಆ ದೂರನ್ನು ಗೌಪ್ಯವಾಗಿಸಿ, ದೂರುದಾರರನ್ನು ಠಾಣೆಗೆ ಕರೆಸದೇ ಸೂಕ್ತ ಕ್ರಮವಹಿಸಲಾಗುತ್ತದೆ. ಈ ಸಂಬಂಧ ಶಾಲೆ ಹಾಗೂ ಪೊಲೀಸ್ ಠಾಣೆಗಳಲ್ಲಿ ದಾಖಲಾತಿ ನಿರ್ವಹಿಸಲಾಗುತ್ತದೆ.

ಯಾವುದೇ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದನ್ನು ಆರಂಭಿಸಲಾಗಿದೆ. ಅದಲ್ಲದೇ ಕುಟುಂಬದವರಿಂದ, ಸಾಮಾಜಿಕ ಜಾಲತಾಣಗಳಿಂದ, ಶಿಕ್ಷಕರಿಂದ ಹಾಗೂ ಇನ್ನಿತರೆ ದೌರ್ಜನ್ಯಗಳಿಂದ ರಕ್ಷಣೆ ನೀಡಬಹುದಾಗಿದೆ. ಬಾಲ್ಯವಿವಾಹ, ಜಾತಿ ಪದ್ಧತಿ ಹಾಗೂ ಇನ್ನಿತರೆ ಅನಿಷ್ಟ ಪದ್ಧತಿಗಳ ವಿರುದ್ಧ ಕ್ರಮವಹಿಸಲು. ಸೂಕ್ತ ಸಲಹೆ ಮತ್ತು ಸಮಾಲೋಚನೆಗಾಗಿ, ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿಗಾಗಿ ಹಾಗೂ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ಧೇಶದಿಂದ ‘ಆಪ್ತ ಗೆಳತಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಹಕಾರಿ:

ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅವರ ಮೇಲಿನ ದೌರ್ಜನ್ಯ ತಡೆಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಆಪ್ತ ಗೆಳತಿ ನಿಮ್ಮ ಬಳಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶತಶತಮಾನಗಳಿಂದಲೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಸಂವಿಧಾನ ಜಾರಿಗೆ ಬಂದ ನಂತರ ಪ್ರತಿಯೊಬ್ಬ ಭಾರತೀಯರು ಸ್ವಾತಂತ್ರ್ಯವಾಗಿ ಬದುಕು ಕಟ್ಟಿಕೊಳ್ಳಲು ಡಾ.ಬಿ.ಆರ್.ಅಂಬೇಡ್ಕರ್ ಅವಕಾಶ ಮಾಡಿಕೊಟ್ಟರು. ಅದಾಗ್ಯೂ ರಾಜ್ಯದಲ್ಲೇ 3 ವರ್ಷಗಳಲ್ಲಿ 444 ಅತ್ಯಾಚಾರ ಪ್ರಕರಣ ಹಾಗೂ 2439 ಮಾನಭಂಗ ಪ್ರಕರಣ ದಾಖಲಾಗಿದೆ. ದೂರುಗಳು ದಾಖಲಾಗದೇ ಅದೆಷ್ಟು ಪ್ರಕರಣಗಳು ಮುಚ್ಚಿಹೋಗಿದೆಯೋ ಎಂದು ಆತಂಕವ್ಯಕ್ತಪಡಿಸಿದರು.

ನ್ಯಾಯಾಲಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾಗಬೇಕು. ವಿದ್ಯಾರ್ಥಿನಿಯರು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಬಹುಮುಖ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ, ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಇತರರು ಉಪಸ್ಥಿತರಿದ್ದರು.

ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರಮನೆ, ಶಾಲೆ, ದುಡಿಮೆಯ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಸಾಕಷ್ಟು ಕಿರುಕುಳಗಳನ್ನು ಅನುಭವಿಸುತ್ತಾರೆ. ಪ್ರತಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂಬ ಭಾವನೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net