

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಶನಿವಾರ ಆರ್‌ಐಡಿಎಫ್, ನಬಾರ್ಡ್ ಯೋಜನೆಯಡಿ ನೂತನವಾಗಿ ನಿರ್ಮಿಸಿದ್ದ 6 ಶಾಲಾ ಕೊಠಡಿಗಳ ಉದ್ಘಾಟನೆ, ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರ, ಡಿಎಂಎಫ್, ನಬಾರ್ಡ್, ಸಿಎಂ ವಿಶೇಷ ಅನುದಾನ, ರಾಜ್ಯವಲಯ ಸೇರಿ 35 ಕೋಟಿ ರೂ. ವೆಚ್ಚದಲ್ಲಿ ಅಗತ್ಯವಿರುವೆಡೆ ನೂತನ ಕಟ್ಟಡಗಳನ್ನೂ ನಿರ್ಮಿಸಲಾಗುತ್ತಿದೆ ಎಂದರು.
ಚಳ್ಳಕೆರೆ ನಗರದ ಬಿಎಂಎಚ್‌ಎಸ್‌ಗೆ, ಹೆಗ್ಗೆರೆ ತಾಯಮ್ಮ ಶಾಲೆ, ಕ್ಷೇತ್ರ ಮಾದರಿ ಬಾಲಕರ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಲಾ 6 ಸೇರಿ 24 ಕೊಠಡಿ ನಿರ್ಮಿಸಲಾಗಿದೆ. ಈವರೆಗೂ 150 ಕೊಠಡಿ ಲೋಕಾರ್ಪಣೆ ಮಾಡಲಾಗಿದೆ ಎಂದರು.
ತುರುವನೂರು ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪದವಿ ಕಾಲೇಜು ನಿರ್ಮಿಸಿದ್ದು, ಉದ್ಘಾಟನಾ ಹಂತದಲ್ಲಿದೆ. ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಶಾಲೆ, ತುರುವನೂರು ಪ್ರೌಢಶಾಲೆಗೆ ತಲಾ 6, ಕೂನಬೇವು ಪ್ರಾಥಮಿಕ ಶಾಲೆಗೆ 4 ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಮುದ್ದಾಪುರದ ಸ.ಪ್ರಾ.ಶಾಲೆಯಲ್ಲಿ 66 ಲಕ್ಷ ರೂ. ವೆಚ್ಚದ 6 ಕೊಠಡಿಗಳನ್ನು ಉದ್ಘಾಟಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂಗವಾಡಿ ಕೇಂದ್ರಗಳು, ಆಸ್ಪತ್ರೆಗಳು, ರಸ್ತೆಗಳು, ಬ್ರಿಡ್ಜ್ ಕಂ ಬ್ಯಾರೇಜ್ ಸೇರಿ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಅನೇಕ ಯೋಜನೆ ರೂಪಿಸಿದೆ. ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತುರುವನೂರು ಹೋಬಳಿಯಲ್ಲಿ ಕೆರೆ-ಕಟ್ಟೆಗಳ ಜೊತೆ ಅನೇಕ ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದು, ಅಂತರ್ಜಲ ವೃದ್ಧಿಯಾಗಲು ಸಹಕಾರಿಯಾಗಿದೆ ಎಂದರು.
ಆಂಜನೇಯ ಸ್ವಾಮಿ ದೇಗುಲ ಲೋಕಾರ್ಪಣೆ: ಸೂರನಹಳ್ಳಿಯಲ್ಲಿ ಶಾಸಕರ ಅನುದಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇಗುಲ ಲೋಕಾರ್ಪಣೆಗೊಳಿಸಿದರು. ಸುಲ್ತಾನಿಪುರ ಕೆರೆ ಕೋಡಿ ಬಿದ್ದಿದ್ದು, ಬಾಗಿನ ಸಮರ್ಪಿಸಿದರು.
ಚಳ್ಳಕೆರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಬುರೆಡ್ಡಿ, ತಹಸೀಲ್ದಾರ್ ಡಾ.ನಾಗವೇಣಿ, ಬಿಇಒ ಎಸ್.ನಾಗಭೂಷಣ್, ಮುದ್ದಾಪುರ ಗ್ರಾಪಂ ಅಧ್ಯಕ್ಷೆ ಮಂಗಳಾ, ಉಪಾಧ್ಯಕ್ಷೆ ಸುಧಾರಾಣಿ, ಸದಸ್ಯರಾದ ಓಬಳೇಶ್, ಶಾಂತಮ್ಮ, ನಾಗರಾಜ್, ಸುದಮ್ಮ, ತಿಮ್ಮರಾಜು, ಮಹೇಶ್, ನಾಗರಾಜ್ ಇತರರಿದ್ದರು.