

ತುಮಕೂರು ; ರಾಜ್ಯದಲ್ಲಿ ಶೇ.22.8 ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ ಎಂದು ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ಡಾ. ಚಂದ್ರಶೇಖರ್ ಕೊಟಗಿ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಕುಣಿಗಲ್ ತಾಲೂಕು ವಿವಿಧ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳಿಗಾಗಿ ‘ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ’ ಕುರಿತು ಕುಣಿಗಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ತರಬೇತಿಯಲ್ಲಿ ಮಾತನಾಡಿದರು.
ತಂಬಾಕು ದುಶ್ಚಟಕ್ಕೆ ವಯಸ್ಕರಲ್ಲದೆ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ, ಶಾಲಾ ಕಾಲೇಜುಗಳ ಸುತ್ತಮುತ್ತಲ ಪ್ರದೇಶಗಳನ್ನು ತಂಬಾಕು ಮುಕ್ತ ಗೊಳಿಸುವ ಉದ್ದೇಶದಿಂದ ಹಾಗೂ ಭವಿಷ್ಯದ ಯುವಜನತೆಯನ್ನು ದುಶ್ಚಟದಿಂದ ದೂರವಿಡಲು ಐಪಿಎಚ್ ಸಂಸ್ಥೆಯು ತುಮಕೂರು ಜಿಲ್ಲೆಯನ್ನು ಆಯ್ದುಕೊಂಡು ‘ತಂಬಾಕು ಮುಕ್ತ ಶಾಲೆ’ ಅಭಿಯಾನ ಕೈಗೆತ್ತಿಕೊಂಡಿದೆ ಎಂದರು. ಅಭಿಯಾನದಡಿ ಮೊದಲ ಹಂತದಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳ ಆಯ್ದ 15 ಶಾಲೆಗಳನ್ನು ತಂಬಾಕು ಮುಕ್ತ ಮಾಡಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ರವಿ ಪ್ರಕಾಶ್, ಐಪಿಎಚ್ ಸಂಸ್ಥೆಯ ಎನ್.ಜಿ.ಅಚ್ಯುತ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ಕೆ.ಎಸ್.ಹರೀಶ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡರು.
ಪ್ರತಿ ವರ್ಷ 10 ಲಕ್ಷ ಜನರು ಸಾವು: ತಂಬಾಕು ಸೇವನೆಯಿಂದ ಪ್ರತಿ ವರ್ಷ ದೇಶದಲ್ಲಿ 10 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಶೇ22.8 ಜನ ತಂಬಾಕಿನ ಚಟಕ್ಕೆ ದಾಸರಾಗಿದ್ದಾರೆ. ಇವರಲ್ಲಿ ಸುಮಾರು 66 ಲಕ್ಷ ಜನ ಅವಧಿಗೂ ಮುನ್ನ ಸಾವನ್ನಪ್ಪುತ್ತಿದ್ದಾರೆ. ಮಕ್ಕಳು ಈ ದುಶ್ಚಟಕ್ಕೆ ದಾಸದಾಗುತ್ತಿರುವುದು ಕಳವಳಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟರು.