ಶಾಲಾ-ಕಾಲೇಜು ಆರಂಭಕ್ಕೆ ಸಿದ್ಧತೆ

3112Klb04
Published on

ಕಲಬುರಗಿ: ನೂತನ ವರ್ಷಾರಂಭದಲ್ಲಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮುಳೇಗಾಂವ ಎಲ್ಲ ಕಾಲೇಜುಗಳ ಮುಖ್ಯಗುರುಗಳಿಗೆ ಸೂಚಿಸಿದ್ದಾರೆ.
ಈಗಾಗಲೇ ಶಾಲಾ ಕಾಲೇಜುಗಳನ್ನು ಸ್ಯಾನಿಟೈಸಿಂಗ್ ಮಾಡಿ ಸಿದ್ದಗೊಳಿಸಲಾಗಿದೆ. ಕರೊನಾ ಹರಡದಂತೆ ತಡೆಯಲು ಸರ್ಕಾರ ಜಾರಿಗೊಳಿಸಿದ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಎಲ್ಲ ಕೋಣೆ ಹಾಗೂ ವಾಹನ ಸ್ಯಾನಿಟೈಸ್ ಮಾಡಬೇಕು, ಪ್ರತಿ ಶಾಲೆ ಮುಖ್ಯ ಗುರುಗಳು ಶಿಕ್ಷಕರು, ಸಿಬ್ಬಂದಿ ಸಭೆ ನಡೆಸಬೇಕು. ಕುಡಿಯಲು ಬಿಸಿ ನೀರಿನ ಬಾಟಲಿ ಮತ್ತು ಸೂಕ್ತ ಮಾಸ್ಕ್ನೊಂದಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಪಾಲಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.
ಪ್ರತಿ ಮಗುವಿನಿಂದ ಪಾಲಕರ ಒಪ್ಪಿಗೆ ಪತ್ರ ಪಡೆಯಬೇಕು. ವಿದ್ಯಾಗಮ ಕಾರ್ಯಕ್ರಮ ಹಾಗೂ ಎಸ್ಒಪಿ ಸುತ್ತೋಲೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಮ್ಮ ಬ್ಲಾಕ್ನ ಎಲ್ಲ ಶಾಲಾ ಮುಖ್ಯಸ್ಥರಿಗೆ ರವಾನಿಸಬೇಕು. ಶಾಲೆಗಳಿಗೆ ಥರ್ಮಲ್ ಸ್ಕ್ಯಾನರ್ ಒದಗಿಸಬೇಕು. ಖಾಸಗಿ ಶಾಲೆಯವರು ತಮ್ಮ ಆಡಳಿತ ಮಂಡಳಿ ಅನುದಾನದಲ್ಲಿ ಈ ಎಲ್ಲವೂ ಖರೀದಿಸಬೇಕು.
ಒಂದು ಕೋಣೆಯಲ್ಲಿ 15 ಮಕ್ಕಳಿಗೆ ಪಾಠ ಬೋಧನೆ ಮಾಡಬೇಕು. ಕೋಣೆಗಳು ವಿಶಾಲವಾಗಿದ್ದರೆ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಮಕ್ಕಳನ್ನು ಕೂಡಿಸಬಹುದು ಎಂದು ಸಕರ್ಾರದ ಸೂಚನೆ ಇದೆ ಎಂದರು.
ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 275 ಪದವಿ ಪೂರ್ವ ಕಾಲೇಜುಗಳಿದ್ದು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಎಷ್ಟು ವಿದ್ಯಾರ್ಥಿಗಳು ಹಾಜರಾಗುತ್ತಾರೆ ಎಂಬುದು ಪ್ರತಿ ದಿನ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net