

ಗುಂಡ್ಲುಪೇಟೆ: ರಾಜ್ಯ ಸರ್ಕಾರ ಮೈಸೂರಿನಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದರಿಂದ ಶಾಲಾ-ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುವಂತಾಯಿತು.
ಪಟ್ಟಣದ ಸಾರಿಗೆ ಡಿಪೋದಲ್ಲಿರುವ 128 ಬಸ್‌ಗಳಲ್ಲಿ ಒಟ್ಟು 73 ಬಸ್‌ಗಳನ್ನು ಮಹಿಳೆಯರನ್ನು ಕರೆದೊಯ್ಯಲು ಪ್ರತಿ ಗ್ರಾಮ ಪಂಚಾಯಿತಿಗೆ ಎರಡರಂತೆ ನಿಯೋಜಿಸಲಾಗಿತ್ತು. ನಿಗದಿತ ಪಂಚಾಯಿತಿಗೆ ಹೋಗಬೇಕಾಗಿದ್ದರಿಂದ ಎಲ್ಲ ಬಸ್‌ಗಳು ಮುಂಜಾನೆ 6 ಗಂಟೆಗೆ ತೆರಳಿದ್ದವು. ಹಾಗಾಗಿ ಗ್ರಾಮಾಂತರ ಪ್ರದೇಶಗಳಿಗೆ ಹೋಗಬೇಕಾಗಿದ್ದ ಬಸ್‌ಗಳ ಸಂಚಾರವನ್ನು ಕಡಿತ ಮಾಡಲಾಗಿತ್ತು. ಇದಲ್ಲದೆ ಜಿಲ್ಲಾ ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಿಗೆ ಸಂಚರಿಸುತ್ತಿದ್ದ ಬಸ್‌ಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಇದರಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳಿಗೆ ಬೇರೆಡೆ ಹೋಗಬೇಕಾಗಿದ್ದ ಸಾರ್ವಜನಿಕರು ಪರದಾಡುವಂತಾಯಿತು.
ಬಸ್ ನಿಲ್ದಾಣಗಳಲ್ಲಿ ಗುಂಪು ಗುಂಪಾಗಿ ಬಸ್‌ಗಳಿಗಾಗಿ ಗಂಟೆಗಟ್ಟಲೇ ಕಾಯುವಂತಾಗಿತ್ತು. ಶಾಲೆಗಳಿಗೆ ಹೋಗುವ ಸಮಯ ಹತ್ತಿರವಾಗುತ್ತಿದ್ದಂತೆ ಆತಂಕಕ್ಕೊಳಗಾದ ವಿದ್ಯಾರ್ಥಿಗಳು ಬೈಕ್, ಗೂಡ್ಸ್ ವಾಹನಗಳು ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಹತ್ತಿಕೊಂಡು ತೆರಳಿದರು. ಆಟೋಗಳಲ್ಲಿ ಮಹಿಳೆಯರು ಮತ್ತು ಪುರುಷರನ್ನು ಒಬ್ಬರ ಮೇಲೆ ಒಬ್ಬರನ್ನು ಕೂರಿಸಿ ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಉಚಿತ ಪ್ರಯಾಣ ಮಾಡುತ್ತಿದ್ದ ಮಹಿಳೆಯರು ಹಣ ಕೊಟ್ಟು ಪ್ರಯಾಣಿಸುವಂತಾಗಿತ್ತು.
ಪಟ್ಟಣದ ಸಾರಿಗೆ ಘಟಕದಿಂದ 73 ಬಸ್‌ಗಳನ್ನು ಮೈಸೂರಿಗೆ ಕಳಿಸಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕೆ ಗ್ರಾಮಾಂತರ ಹಾಗೂ ನಿಗದಿತ ಮಾರ್ಗಗಳಲ್ಲಿ ಉಳಿದ ಬಸ್‌ಗಳು ಸಂಚರಿಸಿವೆ.
ಪುಷ್ಪಾ, ಡಿಪೋ ಮ್ಯಾನೇಜರ್, ಗುಂಡ್ಲುಪೇಟೆ