

ನಾಗಮಂಗಲ: ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಸೇರಿದ ಜಾಗವನ್ನು ಅರಣ್ಯ ಇಲಾಖೆಯವರು ಒತ್ತುವರಿ ಮಾಡಿ ಗಿಡಗಳನ್ನು ಬೆಳೆಸುವ ಮೂಲಕ ಜಾಗ ಅರಣ್ಯ ಇಲಾಖೆಯದ್ದು ಎಂದು ಹೇಳುತ್ತಿದ್ದಾರೆ. ಹೀಗಾಗಿ ಆ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಸರ್ಕಾರಿ ಶಾಲೆ ಜಾಗವನ್ನು ಉಳಿಸಿ.
ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾತೇನಹಳ್ಳಿ ಗ್ರಾಮಸ್ಥರು ತಹಸೀಲ್ದಾರ್ ಅವರನ್ನು ಒತ್ತಾಯಿಸಿದ ಪರಿ ಇದು.
ದಾಖಲೆಗಳಲ್ಲಿ ಗೋಮಾಳ ಹಾಗೂ ಶಾಲೆ ಹೆಸರಿನಲ್ಲಿದ್ದರೂ ಕೂಡ ಪಕ್ಕದಲ್ಲಿ ಅರಣ್ಯವಿರುವ ಕಾರಣ ಶಾಲಾ ಜಾಗವನ್ನು ಒತ್ತುವರಿ ಮಾಡಿಕೊಂಡು ಸಸಿ ಬೆಳೆಸುತ್ತಿದ್ದಾರೆ. ಅರಣ್ಯ ಇಲಾಖೆಯವರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗಿಡ ನೆಟ್ಟಿರುವ ಜಾಗವೆಲ್ಲ ನಮ್ಮ ಇಲಾಖೆಗೆ ಸೇರಿದ್ದು ಎಂದು ಉತ್ತರಿಸುತ್ತಾರೆ. ಆದ್ದರಿಂದ ಸರ್ವೇ ಮಾಡಿ ಸಮಸ್ಯೆ ಬಗೆಹರಿಸಿಕೊಡಿ ಎಂದು ತಹಸೀಲ್ದಾರ್ ನಂದೀಶ್ ಅವರನ್ನು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್, ಸರ್ವೇ ನಡೆಸಿ ಗಡಿ ಗುರುತಿಸುವಂತೆ ಸೂಚಿಸಿದರು. ಆದರೆ ವಲಯ ಅರಣ್ಯಾಧಿಕಾರಿ ಕಾರ್ಯಕ್ರ ಮಕ್ಕೆ ಗೈರಾಗಿದ್ದ ಕಾರಣ ಸರ್ವೇ ಮಾಡಲು ಸಾಧ್ಯವಾಗದ ಕಾರಣ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.
ಕೇಳಿಬಂದ ಸಮಸ್ಯೆಗಳು: ಕಾಲುದಾರಿ ಒತ್ತುವರಿಯಾಗಿದ್ದು ತೆರವುಗೊಳಿಸಿಕೊಡಿ. ವೃದ್ಧಾಪ್ಯ ವೇತನ ಬರುತ್ತಿಲ್ಲ. ಪೌತಿ ಖಾತೆ ಮಾಡಿಕೊಡಿ. ಪಿತ್ರಾರ್ಜಿತ ಆಸ್ತಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಳ್ಳಲು ಯತ್ನಿಸುತ್ತಿದ್ದು ಅದನ್ನು ಖಾತೆ ಮಾಡಿ. ಹೊನ್ನಾವರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಕಂದಾಯ ವಸೂಲಿ ಹೆಸರಿನಲ್ಲಿ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಮನೆಗೆ ವಿದ್ಯುತ್ ಸಂಪರ್ಕ ನೀಡಲು ಸುಖಾಸುಮ್ಮನೆ ಸೆಸ್ಕ್‌ನವರು ಅಲೆಸುತ್ತಿದ್ದಾರೆ. ಮಾಚನಾಯಕನಹಳ್ಳಿ ಗ್ರಾಮ ಸುವರ್ಣ ಗ್ರಾಮ ಯೋಜನೆಯಡಿ ಆಯ್ಕೆಯಾಗಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಮಕ್ಕಳಿಗೆ ಆಸ್ತಿಯನ್ನು ದಾನ ಮಾಡಿದ್ದು, ನಂತರ ಅವರು ನನ್ನನ್ನು ನಿರ್ಲಕ್ಷಿಸುತ್ತಿರುವುದರಿಂದ ಅದನ್ನು ರದ್ದುಗೊಳಿಸುವಂತೆ ಕೋರಿ ವೃದ್ಧ ಮನವಿ ಸಲ್ಲಿಸಿದರು. ಹೀಗೆ ಹತ್ತಾರು ರೀತಿಯ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಳಿ ಮನವಿ ಸಲ್ಲಿಸಿದರು. ಅರ್ಜಿ ಸ್ವೀಕರಿಸಿದ ಅಧಿಕಾರಿ, ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ಕಾಟಾಚಾರಕ್ಕೆ ಕಾರ್ಯಕ್ರಮ: ಸರ್ಕಾರದ ಆದೇಶ ಪಾಲಿಸಬೇಕೆಂಬ ನೆಪಮಾತ್ರಕ್ಕೆ ಕಾರ್ಯಕ್ರಮವನ್ನು ಆಯೋಜಿಸಿದಂತೆ ಕಂಡುಬಂತು. ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಾರ್ವಜನಿಕರು ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮ ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ತಹಸೀಲ್ದಾರ್ ನಂದೀಶ್ 12 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಅಧಿಕಾರಿಗಳು ತಹಸೀಲ್ದಾರ್‌ಗಾಗಿ ಕಾದು ಹೈರಾಣಾಗಿ ವಾಪಸ್ ತೆರಳಿದರು. ಈ ರೀತಿಯ ಕಾಟಾಚಾರದ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸದಿದ್ದರೂ ಆಗುತ್ತದೆ. ಜಿಲ್ಲಾಧಿಕಾರಿ ಆಗಮಿಸಲ್ಲ. ರಾತ್ರಿ ವಾಸ್ತವ್ಯವೂ ಇರಲ್ಲ. ಕನಿಷ್ಠ ಪಕ್ಷ ತಹಸೀಲ್ದಾರ್ ಸರಿಯಾದ ಸಮಯಕ್ಕೆ ಆಗಮಿಸದ ಮೇಲೆ ಕಾರ್ಯಕ್ರಮವೇಕೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಿಇಒ ಸುರೇಶ್, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಕುಮಾರ್, ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ್, ರೇಷ್ಮೆ ವಿಸ್ತರಣಾಧಿಕಾರಿ ಶಿವಾನಂದ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಎಡಿಎಲ್‌ಆರ್ ಪ್ರಮೋದ್, ಉಪತಹಸೀಲ್ದಾರ್ ಹರ್ಷ, ಗ್ರಾ.ಪಂ.ಸದಸ್ಯ ನರೇಂದ್ರ ಇದ್ದರು.