ಶಾಲಾ ಅವ್ಯವಸ್ಥೆ ವಿರುದ್ಧ ಅಸಮಾಧಾನ

kgl2..
ತಾಲೂಕಿನ ಹಳೇ ಹಂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಎಸ್‌ಡಿಎಂಸಿ ಸಭೆ ನಡೆಯಿತು.
Published on

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಡಿಎಂಸಿ ಸಭೆಯಲ್ಲಿ ಸದಸ್ಯರು ಶಾಲಾ ಅವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿದರು.

ಶಾಲೆಯ ದುಸ್ಥಿತಿ ಬಗ್ಗೆ ಗ್ರಾಮದ ಮುಖಂಡರು, ಯುವಕರು ಹಾಗೂ ಹಳೆಯ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಈ ಶಾಲೆಯ ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬಿದ್ದಿದ್ದಾರೆ. ಮಕ್ಕಳಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗುತ್ತಿದೆ. ಮುಖ್ಯಶಿಕ್ಷಕಿ ಮಾಣಿಕ್ಯ ಅವರ ಅನಾರೋಗ್ಯ ಕಾರಣದಿಂದ ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರು ಅವರನ್ನು ತಾತ್ಕಾಲಿಕವಾಗಿ ಈ ಶಾಲೆಗೆ ನೇಮಿಸಲಾಗಿದೆ ಹಾಗೂ ಸುಮಾ, ನಾಗರತ್ನ ಎಂಬ ಇಬ್ಬರು ಅತಿಥಿ ಶಿಕ್ಷಕರು ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದಾರೆ. ಶಾಲೆಗೆ ಕಾಯಂ ಶಿಕ್ಷಕರಿಲ್ಲದ ಕಾರಣ ದಿನೇ ದಿನೆ ಮಕ್ಕಳಲ್ಲಿ ಶಿಕ್ಷಣ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ದೂರಿದರು.

2010-12ನೇ ಸಾಲಿನಲ್ಲಿ 300 ರಿಂದ 350 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಈಗ 46 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಶಾಲೆಯ ಗೇಟ್ ಮುರಿದಿದ್ದು, ಇಲ್ಲಿನ ಆವರಣ ಕುಡುಕರ ಅಡ್ಡೆಯಾಗಿದೆ. ಶಾಲೆಯ ಎರಡು ಹಳೇ ಕಟ್ಟಡಗಳು ಶಿಥಿಲಗೊಂಡಿದ್ದು, ಇದನ್ನು ಇನ್ನೂ ಕೆಡವಿಲ್ಲ. ಶಾಲೆಯಲ್ಲಿ ನೂತನ ಕಟ್ಟಡ ನಿರ್ಮಾಣವಾಗಿ 3-4 ವರ್ಷಗಳೇ ಕಳೆದಿದೆ. ಆದರೆ ಇನ್ನೂ ವಿದ್ಯಾರ್ಥಿಗಳ ಉಪಯೋಗಕ್ಕೆ ಮುಕ್ತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net