

ಕಾಗವಾಡ: ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಉಗಾರ ಬಿ.ಕೆ. ಗ್ರಾಮದ ಭರತೇಶ ಖಂಡೇರಾಜುರೆ, ಚಂದ್ರಕಾಂತ ಕಿವಾಟೆ, ಧರೆಪ್ಪ ಕುಸನಾಳೆ, ಮಲ್ಲು ಕುರುಬರ, ಅಣ್ಣು ಕುರಬರ ಹಾಗೂ ಮಹಾದೇವ ಕುರುಬರ ಅವರ ಸುಮಾರು 20 ಎಕರೆ ಕಬ್ಬು ಸುಟ್ಟ ಘಟನೆ ಬುಧವಾರ ನಡೆದಿದೆ.
ಬೆಂಕಿ ಹೊತ್ತಿದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಅಷ್ಟೊತ್ತಿಗೆ ಅಪಾರ ಪ್ರಮಾಣದ ಕಬ್ಬು ಸುಟ್ಟಿದೆ. ಇನ್ನೂ ಹೆಚ್ಚು ಹಾನಿಯಾಗದಂತೆ ಬೆಂಕಿ ನಂದಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.