

ಹಾಸನ: ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟುಕರಕಲಾಗಿ, ಮನೆಯಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಹೊಸಲೈನ್ ರಸ್ತೆಯಲ್ಲಿ ನಡೆದಿದೆ.
ಆರು ಮನೆಗಳಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿ ಮುಸ್ತಾಫ್ ಎಂಬುವವರು ವಾಸವಿದ್ದರು. ವೋಲ್ಟೆಜ್ ವ್ಯಾತ್ಯಾಸದಿಂದ ರೆಫ್ರಿಜರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಕೊಂಡಿದೆ. ಬೆಂಕಿ ಇಡೀ ಮನೆಗೆ ವ್ಯಾಪಿಸಿದ್ದು ಅದೃಷ್ಟವಶಾತ್ ರೆಫ್ರಿಜರೇಟರ್ ಪಕ್ಕದಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬೆಂಕಿ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸುವ ಮುನ್ನ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಆಗಮಿಸಿ ನಂದಿಸಿ ದೊಡ್ಡ ಅವಘಡವನ್ನು ತಪ್ಪಿಸಿದ್ದಾರೆ. ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದ ಐವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬೆಂಕಿನಿಂದ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.