ಮೈಸೂರು: ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜಿನಲ್ಲಿ ಜಿಲ್ಲಾ ಕೌಶಲ ಮಿಷನ್, ನಾಂದಿ ಫೌಂಡೇಷನ್, ಐಕ್ಯೂಎಸಿ ಮತ್ತು ವೃತ್ತಿಪರ ಮಾರ್ಗದರ್ಶನ ಕೋಶದಿಂದ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿರುವ ಔದ್ಯೋಗಿಕ ಕೌಶಲ ಕುರಿತ 6 ದಿನಗಳ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ದೊರೆಯಿತು.
ಜಿಲ್ಲಾ ಕೌಶಲ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಸಿ.ಎಸ್. ಸುದರ್ಶನ್ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿಗಳು ಔದ್ಯೋಗಿಕ ಕೌಶಲಗಳನ್ನು ವೃದ್ಧಿಸಿಕೊಳ್ಳುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಜತೆಗೆ, ಕೌಶಲ ಕರ್ನಾಟಕದ ವಿವಿಧ ಯೋಜನೆಗಳ ಬಗ್ಗೆ ಸ್ಥೂಲವಾಗಿ ವಿವರಣೆ ನೀಡಿದರು.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಚಂದ್ರಶೇಖರ್ ಮಾತನಾಡಿ, ಕಾಲೇಜಿನ ಪ್ರಾಂಶುಪಾಲರು ಮತ್ತು ವೃತ್ತಿಪರ ಮಾರ್ಗದರ್ಶನ ಕೋಶದ ಸದಸ್ಯರು ವಿದ್ಯಾರ್ಥಿಗಳ ಒಳಿತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಣೆಯಿಂದ ಆಯೋಜಿಸುತ್ತಿರುವುದು ಸಂತಸದ ಸಂಗತಿ. ಇದರಿಂದ ವಿದ್ಯಾರ್ಥಿಗಳ ಬೌದ್ಧಿಕ ವೃದ್ಧಿ ಜತೆಗೆ ಜೀವನದ ನೆಲೆಗೆ ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಎಂ.ದೇವಿಕಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಪದವಿಯ ಅರ್ಹತೆ ಜತೆಗೆ ಕೌಶಲಾಧಾರಿತ ಸಾಮರ್ಥ್ಯ ಹೊಂದಿರಬೇಕು. ಇದರಿಂದ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ. ಅದರೊಟ್ಟಿಗೆ ಅತ್ಯುತ್ತಮ ಔದ್ಯೋಗಿಕ ಅವಕಾಶಗಳು ನಮ್ಮನ್ನು ಅರಸಿ ಬರುತ್ತವೆ ಎಂದು ಹೇಳಿದರು.
ಜಿಲ್ಲಾ ಕೌಶಲ ಅಭಿವೃದ್ಧಿ ಸಹಾಯಕ ನಿರ್ದೇಶಕ ಸಿ.ಎಸ್.ಸುದರ್ಶನ್, ಅಭಿವೃದ್ಧಿ ಅಧಿಕಾರಿ ನಾರಾಯಣ ಮೂರ್ತಿ, ಜಿಲ್ಲಾ ಕೌಶಲಾಭಿವೃದ್ಧಿ ಕೇಂದ್ರದ ಸಂಚಾಲಕ ವಿನಾಯಕ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ನಾಂದಿ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿ ಕಾವ್ಯ ಅಯ್ಯರ್ ಇದ್ದರು.