ಶಾದಿ ಮಹಲ್‌ಗೆ 50 ಲಕ್ಷ ರೂ.ನೆರವು; ಸಚಿವ ಎಂಟಿಬಿ ನಾಗರಾಜ್ ಭರವಸೆ

25d838d5-4055-4d91-b89f-f3beafacb65a
Published on

ಸೂಲಿಬೆಲೆ: ಕನಕಭವನ, ಕೆಂಪೇಗೌಡಭವನ, ಅಂಬೇಡ್ಕರ್ ಭವನದಂತೆ ತಾಲೂಕಿನಲ್ಲಿ ಶಾದಿಮಹಲ್ ನಿರ್ಮಾಣಕ್ಕೂ ಆರ್ಥಿಕ ನೆರವು ನೀಡಲಾಗುವುದು, ಶೀಘ್ರದಲ್ಲೇ 50 ಲಕ್ಷ ರೂ. ಮಂಜೂರು ಮಾಡಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಸೂಲಿಬೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಎಲ್ಲ ಸಮುದಾಯಗಳ ಅಭಿವೃದ್ಧಿಗೂ ಒತ್ತು ನೀಡಿವೆ. ಯಾವುದೇ ತಾರತಮ್ಯ ಮಾಡಿಲ್ಲ ಎಂದು ಹೇಳಿದರು.

ತಾಲೂಕಿನಲ್ಲಿ ಈ ಹಿಂದಿನಿಂದಲೂ ಎಲ್ಲ ಸಮುದಾಯದವರೊಂದಿಗೆ ಸಹಬಾಳ್ವೆ, ಸಮಾನತೆ ಕಾಯ್ದುಕೊಂಡು ಬರಲಾಗಿದೆ, ಅಭಿವೃದ್ಧಿ ವಿಷಯದಲ್ಲೂ ತಾರತಮ್ಯ ಮಾಡಿಲ್ಲ. ಸಮುದಾಯದವರು ಅಭಿವೃದ್ಧಿ ವಿಷಯವಾಗಿ ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ತಳಮಟ್ಟದ ಸಂಘಟನೆ ಅವಶ್ಯ: ಚುನಾವಣೆ ವರ್ಷದಲ್ಲಿ ಕಾರ್ಯಕರ್ತರು ತಳಮಟ್ಟದಿಂದ ಸಂಘಟಿತರಾಗಬೇಕು. ಕಾರ್ಯಕರ್ತರು, ಮುಖಂಡರ ನಡುವೆ ಯಾವುದೇ ಬಿನ್ನಾಭಿಪ್ರಾಯವಿದ್ದರೂ ಚರ್ಚಿಸಿ, ಪರಿಹರಿಸಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ, ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಮನಸ್ತಾಪವಿದ್ದರೆ ನೇರವಾಗಿ ನನ್ನನ್ನು ಕಾಣಬಹುದು. ಮುಖಾಮುಖಿ ಕುಳಿತು ಸರಿಪಡಿಸಿಕೊಳ್ಳಲು ಪ್ರಯತ್ನಿಸೋಣ ಎಂದು ಕಾರ್ಯಕರ್ತರಿಗೆ ತಿಳಿಹೇಳಿದರು.

ಗಮನ ಸೆಳೆದ ನಾಗಿಣಿ ನೃತ್ಯ

ಅಲ್ಪಸಂಖ್ಯಾತ ಕಾರ್ಯಕರ್ತರ ಒತ್ತಾಯದ ಮೇರೆಗೆ ಸಚಿವ ಎಂಟಿಬಿ ನಾಗರಾಜ್ ಕಾರ್ಯಕರ್ತರೊಂದಿಗೆ ನಾಗಿಣಿ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು. ಅಭಿಮಾನಿಗಳು ನೃತ್ಯ ಮಾಡುವಂತೆ ಪ್ರೇರೇಪಿಸಿ ನಿಂಬೆ ಹಣ್ಣು ನೀಡಿದರು. ನಿಂಬೆಹಣ್ಣನ್ನು ಜೇಬಿಗೆ ಇಟ್ಟುಕೊಂಡ ಸಚಿವರು ಭರ್ಜರಿ ಸ್ಟೆಪ್ ಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net