

ನೆಲಮಂಗಲ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ತಡೆದು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಡಿವೈಎಸ್‌ಪಿ ಎಚ್.ಪಿ.ಜಗದೀಶ್ ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಪೊಲೀಸ್ ಇಲಾಖೆ ಭಾನುವಾರ ಆಯೋಜಿಸಿದ್ದ ಉಪವಿಭಾಗೀಯಮಟ್ಟದ ಪರಿಶಿಷ್ಟ ಜಾತಿ, ಪಂಗಡಗಳ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಶೋಷಿತ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಿವೆ. ದಲಿತ ಸಂಘಟನೆಗಳ ಮುಖಂಡರು ಇಂಥ ಪ್ರಕರಣ ನಡೆದಾಗ ಸಂತ್ರಸ್ತರಿಗೆ ನೆರವಾಗುವ ಜತೆಗೆ ದೂರು ದಾಖಲಿಸಿದರೆ, ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರು ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ, ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.
ಅನುಮಾನಾಸ್ಪದ ಸ್ಥಳಗಳ ಪಟ್ಟಿ: ಉಪವಿಭಾಗ ವ್ಯಾಪ್ತಿಗೆ ಸಂಬಂಧಿಸಿದಂತೆ ಈಗಾಗಲೇ 5 ಪೊಲೀಸ್ ಠಾಣೆಯಿಂದ ಅನುಮಾನಾಸ್ಪದ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ. ಜತೆಗೆ ಅತಿಹೆಚ್ಚು ಗುಂಪುಗಾರಿಕೆ, ಮದ್ಯಸೇವನೆ ಮಾಡುವ ಬಡಾವಣೆಗಳನ್ನೂ ಗುರುತಿಸಲಾಗಿದೆ. ಅಲ್ಲೆಲ್ಲ ಬೀಟ್ ವ್ಯವಸ್ಥೆ ಹೆಚ್ಚಿಸುವಂತೆ ಠಾಣಾಧಿಕಾರಿಗಳಿಗೆ ಈಗಾಗಲೆ ನಿರ್ದೇಶನ ನೀಡಲಾಗಿದೆ ಎಂದು ಡಿವೈಎಸ್‌ಪಿ ಮಾಹಿತಿ ನೀಡಿದರು.
ಕುಂದುಕೊರತೆಗಳು: ತಾಲೂಕಿನಾದ್ಯಂತ ಕೆಲ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಅದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕು ಎಂದು ದಲಿತ ಮುಖಂಡರು ಮನವಿ ಮಾಡಿಕೊಂಡರು. ನಗರದ ನಿರ್ಜನ ಪ್ರದೇಶದಲ್ಲಿ ರಾತ್ರಿ ವೇಳೆ ಪುಂಡರ ಹಾವಳಿ ಮತ್ತು ರಸ್ತೆಯಲ್ಲೆ ನಿಂತು ಮದ್ಯ ಸೇವನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿವಾರಿಸುವಲ್ಲಿ ಆಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಮಾತನಾಡಿ, ದಲಿತ ಸಮುದಾಯದ ಮುಖಂಡರು ಠಾಣೆಗೆ ಬಂದರೆ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸುತ್ತಾರೆ. ಈ ಬಗ್ಗೆ ಅವರಿಗೆ ತಿಳಿವಳಿಕೆ ಹೇಳಬೇಕು ಎಂದು ಮನವಿ ಮಾಡಿಕೊಂಡರು. ನಗರ ಪೊಲೀಸ್ ಠಾಣೆ ಸಿಪಿಐ ಎ.ವಿ. ಕುಮಾರ್, ಸಂಚಾರ ವಿಭಾಗದ ಇನ್‌ಸ್ಪೆಕ್ಟರ್ ಅರುಣ್, ಎಸ್‌ಐಗಳಾದ ಎಚ್.ಟಿ. ವಸಂತ್, ಡಿ.ಆರ್. ಮಂಜುನಾಥ್, ದಾಳೇಗೌಡ, ಎನ್. ಸುರೇಶ್, ಚಿಕ್ಕನರಸಿಂಹಯ್ಯ ಮತ್ತಿತರರು ಇದ್ದರು.
ಸಿಬ್ಬಂದಿ ಕೊರತೆಯಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ನಿಯೋಜನೆ ಬಗ್ಗೆ ಮೇಲಧಿಕಾರಿಗಳ ಅನುಮತಿ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಆಯಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಜತೆ ಚರ್ಚಿಸಿ ಕಾನೂನಾತ್ಮಕವಾಗಿ ಎಲ್ಲವನ್ನೂ ಪರಿಹರಿಸಲಾಗುವುದು. ಹರೀಶ್, ಸಿಪಿಐ