

ಕೊಪ್ಪಳ: ಗೌರಿ&ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿ&ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಮನವಿ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.
ನಮ್ಮ ದೇಶ ಶಾಂತಿಗೆ ಹೆಸರಾಗಿದೆ. ವಿವಿಧ ಜಾತಿ, ಧರ್ಮದವರಿದ್ದರೂ ಪರಸ್ಪರ ಸಹೋದರತೆಯಿಂದ ಬದುಕುತ್ತಿದ್ದೇವೆ. ಹಬ್ಬಗಳು ನಮ್ಮ ಸಂಭ್ರಮ ಹೆಚ್ಚಿಸಬೇಕು. ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬಗಳನ್ನು ಶಾಂತಿ&ಸೌಹಾರ್ದತೆಯಿಂದ ಆಚರಿಸಬೇಕು. ಪಿಒಪಿ ಗಣೇಶ ಬಳಸುವಂತಿಲ್ಲ. ಆದರೂ, ಇನ್ನು ಕೆಲವೆಡೆ ಅವುಗಳನ್ನೇ ಪ್ರತಿಷ್ಠಾಪಿಸಲಾಗುತ್ತಿದೆ. ಈ ವರ್ಷ ಕಡ್ಡಾಯವಾಗಿ ಎಲ್ಲರೂ ಪರಿಸರಸ್ನೇಹಿ ಮೂರ್ತಿ ಕೂಡಿಸಿ. ಒಂದು ವೇಳೆ ಪಿಒಪಿ ಮೂರ್ತಿ ಕೂಡಿಸಿದರೆ ವಶಕ್ಕೆ ಪಡೆಯಲಾಗುವುದು. 800 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ರಸ್ತೆಗಳ ದುರಸ್ಥಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಂಡು ಮೂರ್ತಿ ಇಡಿ. ಹೆಚ್ಚು ಜನರು ಓಡಾಡುವ ರಸ್ತೆಗಳಲ್ಲಿ ಟ್ರಾಫಿಕ್ ಆಗದಿರಲಿ. ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಸಾಮಾಜಿಕ ಜಾಲತಾಣಗಳ ಬಗ್ಗೆಯೂ ತೀವ್ರ ನಿಗಾವಹಿಸಲಾಗಿದೆ. ಕೋಮು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡುವ ಸಂದೇಶಗಳನ್ನು ಹಾಕಬಾರದು. ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಮಾತನಾಡಿ, ಹಬ್ಬ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಕಳೆದ ಬಾರಿ ಯಾವುದೇ ಸಮಸ್ಯೆ ಆಗದಂತೆ ಹಬ್ಬ ಆಚರಿಸಲಾಗಿದೆ. ಈ ವರ್ಷವೂ ಶಾಂತಿಯಿಂದ ಹಬ್ಬ ಆಚರಿಸಬೇಕು. ಮೂರ್ತಿ ಕೂಡಿಸುವವರೂ ಕಡ್ಡಾಯವಾಗಿ ಎಲ್ಲ ಪರವಾನಗಿ ಪಡೆಯಿರಿ. ಅಗ್ನಿನಂದಕ ಬಳಸಿ. ಸಿಸಿಟಿವಿ ಕ್ಯಾಮರಾ ಅಳವಡಿಸಿ. ಜನರು ಬಂದು ಹೋಗಲು ಪ್ರತ್ಯೇಕ ಮಾರ್ಗ ರಚಿಸಿ. ಮೂರ್ತಿ ವಿಸರ್ಜನೆ ಮಾರ್ಗ ಪಟ್ಟಿ ಮುಂಚಿತವಾಗಿ ನೀಡಿ. ಪರವಾನಗಿ ಇಲ್ಲದ ರಸ್ತೆಯಲ್ಲಿ ಮೆರವಣಿಗೆಗೆ ಅವಕಾಶವಿಲ್ಲ. ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಂದೇಶ ಹಂಚಿಕೊಳ್ಳುವಿಕೆ, ಾರ್ವರ್ಡ್, ಲೈಕ್, ಕಮೆಂಟ್ ಮಾಡುವುದೂ ಅಪರಾಧ. ಹಾಗೆ ಮಾಡುವವರ ವಿರದ್ಧ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.
ಪ್ರಮುಖರಾದ ಸೈಯದ್ ನಾಸೀರ ಹುಸೇನಿ, ಸಿದ್ದಪ್ಪ ಹಂಚಿನಾಳ, ವಸಂತಕುಮಾರ ಬಾವಿಮನಿ, ಶಾಮಿದ್ ಮನಿಯಾರ್, ಕರಿಬಸಪ್ಪ ಬಿನ್ನಾಳ, ಹನುಮಂತಪ್ಪ ಹ್ಯಾಟಿ ಇನ್ನಿತರರು ಸಲಹೆ ನೀಡಿದರು.
ಎಡಿಸಿ ಸಿದ್ರಾಮೇಶ್ವರ, ಎಎಸ್ಪಿ ಹೇಮಂತ್ ಕುಮಾರ್, ಎಸಿ ಕ್ಯಾ.ಮಹೇಶ್ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಡಿವೈಎಸ್ಪಿಗಳಾದ ಮುತ್ತಣ್ಣ ಸರವಗೋಳ, ಸಿದ್ದಲಿಂಗಪ್ಪಗೌಡ ಪಾಟೀಲ ಇತರರಿದ್ದರು.