ಶಾಂತಿಗೆ ಸಾಮರಸ್ಯದ ಬದುಕು ಮೂಲ

Oplus_16908288
ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ದಸರಾ ಧರ್ಮ ಸಮ್ಮೇಳನದಲ್ಲಿ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರಿಗೆ ಶಿವಾಚಾರ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಹವಾ ಮಲ್ಲಿನಾಥ ಮಹಾರಾಜ್, ಶ್ರೀ ರಾಜೇಶ್ವರ ಶಿವಾಚಾರ್ಯ, ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶಾಸಕ ಶರಣು ಸಲಗರ ಇತರರಿದ್ದರು.
Published on

ಬಸವಕಲ್ಯಾಣ: ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಜೀವನದಲ್ಲಿ ಪರಸ್ಪರ ನಂಬಿಕೆ, ವಿಶ್ವಾಸಗಳು ಬಹಳ ಮುಖ್ಯ. ನಂಬಿಕೆ ಕಳೆದುಕೊಂಡರೆ ಬಾಳು ಬರಡು. ನಂಬಿಕೆ ಗಳಿಸಿಕೊಳ್ಳುವುದು ಸುಲಭದ ಮಾತಲ್ಲ. ಪರಸ್ಪರ ಸಾಮರಸ್ಯದಿಂದ ಬಾಳಿದರೆ ಎಲ್ಲೆಡೆ ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ೯ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜತೆ ಹೋರಾಡಬೇಕಾದದ್ದು ಅನಿವಾರ್ಯ. ಒಳ್ಳೆಯದಕ್ಕಿಂತ ಕೆಟ್ಟದ್ದು ಬಹುಬೇಗ ಬೆಳೆದು ಅಷ್ಟೇ ಬೇಗ ನಾಶವಾಗುತ್ತದೆ. ಬೆಳಗುವ ಸೂರ್ಯನಿಗೆ ಮಣ್ಣು ಎರಚಿದರೆ ಅದು ಸೂರ್ಯನಿಗೆ ತಾಕುವುದಿಲ್ಲ. ಎರಚಿದವರ ಕಣ್ಣಲ್ಲಿ ಬೀಳುವುದೇ ಹೊರತು ಸಜ್ಜನರಿಗೆ ತಾಕುವುದಿಲ್ಲ ಎಂದರು.

ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಸಾಮರಸ್ಯ ಬದುಕಿಗೆ ಸಾಕ್ಷಿಯಾಗಿದೆ. ವೀರಶೈವ ಲಿಂಗಯತ ಎರಡೂ ಒಂದೇ ಎಂದು ಹೇಳಿದರು.

ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ಶ್ರೀ ವಾಮದೇವ ಮಹಂತ ಶಿವಾಚಾರ್ಯ ಉಪನ್ಯಾಸ ನೀಡಿದರು. ಕಡಕೋಳ ಶ್ರೀ ಮಡಿವಾಳೇಶ್ವರ ಮಠದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯ ನೇತೃತ್ವ, ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜ ಸಮ್ಮುಖ ವಹಿಸಿದ್ದರು.

ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾರಕೂಡ, ಶ್ರೀ ರಾಜೇಶ್ವರ ಶಿವಾಚಾರ್ಯ, ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶಾಸಕ ಶರಣು ಸಲಗರ, ಪ್ರಮುಖರಾದ ಮಲ್ಲಿಕಾರ್ಜುನ ಗುಂಗೆ, ಸುನೀಲ ಪಾಟೀಲ್, ಸುರೇಶ ಸ್ವಾಮಿ, ಬಿ.ಜಿ. ಶೆಟಗಾರ, ಬಿಇಒ ಸಿದ್ಧವೀರಯ್ಯಾ ರುದ್ರನೂರ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ ಇದ್ದರು. ಶ್ರೀ ಶಿವಮೂರ್ತಿ ಶಿವಾಚಾರ್ಯ ಬಬಲಾದ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಜಡಗೆ ಸ್ವಾಗತಿಸಿದರು. ಶಾಂತಾ ಆನಂದ ಹಾಗೂ ರಮೇಶ ರಾಜೋಳೆ ನಿರೂಪಿಸಿದರು.

ಪ್ರಶಸ್ತಿ: ಧಾರ್ಮಿಕ ಮತ್ತು ಪಾರಂಪರಿಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಮುಕ್ತಿಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರಿಗೆ ಶಿವಾಚಾರ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಿ ಜಗದ್ಗುರುಗಳು ಶುಭ ಹಾರೈಸಿದರು.

ಗೌರವ ಗುರುರಕ್ಷೆ: ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಚಂದನಕೇರಾ, ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯ ಟೆಂಗಳಿ, ಶ್ರೀ ತ್ರಿಮೂರ್ತಿ ಶಿವಾಚಾರ್ಯ ತೋಟ್ನಳ್ಳಿ, ಶ್ರೀ ಕರುಣೇಶ್ವರ ಶಿವಾಚಾರ್ಯ ನಿಡಗುಂದಾ ಅವರಿಗೆ ಗೌರವ ಗುರುರಕ್ಷೆ ನೀಡಿ ಜಗದ್ಗುರುಗಳು ಆಶೀರ್ವದಿಸಿದರು.

ನಜರ್ ಸಮರ್ಪಣೆ: ಸಮಾರಂಭದ ಕೊನೆಗೆ ಶಿವಾಚಾರ್ಯರು, ಶ್ರೀಪೀಠದ ಸಿಬ್ಬಂದಿ, ಧರ್ಮಾಭಿಮಾನಿಗಳು ಹಾಗೂ ಆನೆ ಅರ್ಪಿಸಿದ ಆಕರ್ಷಕ ನಜರ್(ಗೌರವ) ಸಮರ್ಪಣೆ ಕಾರ್ಯಕ್ರಮ ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ನಜರಿನೊಂದಿಗೆ ಮುಕ್ತಾಯಗೊಂಡಿತು. ನಜರ್ ನಿರೂಪಣೆಯನ್ನು ಮಳಲಿ ಮಠದ ಶ್ರೀ ಡಾ.ನಾಗಭೂಷಣ ಶಿವಾಚಾರ್ಯ ನಡೆಸಿಕೊಟ್ಟರು.

ಪೂಜಿಸುವ, ಭಜಿಸುವ ದಾರಿ ಹಲವಾದರೂ ಸೇರುವ ಗುರಿ ಒಂದೇ ಎಂದು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶರಣರ ಚಿಂತನೆ ಅರಿತು ಬಾಳಿದಾಗ ಎಲ್ಲೆಡೆ ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯ. ವೀರಶೈವ ಧರ್ಮದಲ್ಲಿ ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯಬಹಳ ದೊಡ್ಡದೆಂದು ಸಾರಲಾಗಿದೆ. ಜೀವ ಜಗತ್ತಿಗೆ ವೀರಶೈವ ಲಿಂಗಾಯತ ಧರ್ಮ ಕೊಟ್ಟ ಕೊಡುಗೆ ಅಮೂಲ್ಯ.

| ಶ್ರೀ ಡಾ.ವೀರಸೋಮೇಶ್ವರ ಜಗದ್ಗುರು ಬಾಳೆಹೊನ್ನೂರು ರಂಭಾಪುರಿ ಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net