ಶಾಂತಿ, ಸೌಹಾರ್ದದಿಂದ ಬಕ್ರೀದ್ ಆಚರಿಸಿ

29 vikram 10
Published on

ಧಾರವಾಡ: ಕರೊನಾ ಹರಡುವಿಕೆ ಹೆಚ್ಚಾಗಿದ್ದರಿಂದ ಪ್ರತಿ ಹಬ್ಬಗಳನ್ನು ಜಾಗೃತಿಯಿಂದ ಆಚರಿಸಲು ಸರ್ಕಾರ ಮಾರ್ಗಸೂಚಿ ನೀಡಿದೆ. ಆ. 1ರಂದು ಆಚರಿಸುವ ಬಕ್ರೀದ್ ಹಬ್ಬದಲ್ಲಿ ನಿರ್ದಿಷ್ಟ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರೊನಾ ಮುಂಜಾಗ್ರತೆ ಕ್ರಮಗಳ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬದ ಜತೆಗೆ ಕುಟುಂಬ ಸದಸ್ಯರ ಆರೋಗ್ಯವೂ ಮುಖ್ಯ. ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಜಿಲ್ಲಾಡಳಿತ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಮಸೀದಿಗಳ ಮೈಕ್ ಮೂಲಕ ಹಾಗೂ ಜಮಾತ್, ಧಾರ್ವಿುಕ ಮುಖಂಡರ ಮೂಲಕ ಪ್ರತಿ ಮನೆಗಳಿಗೂ ಹಬ್ಬದ ಆಚರಣೆಯ ಮಾರ್ಗಸೂಚಿ ತಲುಪಿಸಬೇಕು ಎಂದರು.

ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾತನಾಡಿ, ಮಸೀದಿಗಳ ಎದುರು ಅನಗತ್ಯ ಜನಸಂದಣಿ ಆಗದಂತೆ ಎಚ್ಚರ ವಹಿಸಬೇಕು. ಹಬ್ಬದ ನಂತರ ತ್ಯಾಜ್ಯವಿಲೇವಾರಿಯನ್ನು ಪಾಲಿಕೆಯು ಮುತುವರ್ಜಿಯಿಂದ ಮಾಡಬೇಕು ಎಂದರು.

ಎಸ್ಪಿ ವರ್ತಿಕ ಕಟಿಯಾರ್ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ಕಂಟೇನ್ಮೆಂಟ್ ಜೋನ್​ದಲ್ಲಿನ ಜನರು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಕಂಟೇನ್ಮೆಂಟ್ ಜೋನ್​ನಿಂದ ಕರೊನಾ ಹೆಚ್ಚು ಪಸರಿಸುವ ಸಾಧ್ಯತೆ ಇರುವುದರಿಂದ ಅಲ್ಲಿನ ನಿವಾಸಿಗಳು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂದರು.

ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ, ಧಾರವಾಡ ಅಂಜುಮನ್ ಸಂಸ್ಥೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಮಾಜಿ ಮೇಯರ್ ಐ.ಎಂ. ಜವಳಿ, ಮುಖಂಡರಾದ ಜಾಫರ್ ಮನಿಯಾರ್, ಸೋಯಬ್ ಜಮಾದಾರ, ವಿವಿಧ ಮಸೀದಿಗಳ ಮುಖ್ಯಸ್ಥರು ಮಾತನಾಡಿದರು.

ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸೂಫ್ ಸವಣೂರ, ಕಾರ್ಯದರ್ಶಿ ಅಲ್ತಾಫ್ ಕಿತ್ತೂರ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಉಪಪೊಲೀಸ್ ಆಯುಕ್ತ ಆರ್.ಬಿ. ಬಸರಗಿ, ಸಹಾಯಕ ಪೊಲೀಸ್ ಆಯುಕ್ತರಾದ ಜಿ. ಅನುಷಾ, ಮಲ್ಲಾಪುರ, ತಹಸೀಲ್ದಾರರಾದ ಡಾ. ಸಂತೋಷ ಬಿರಾದಾರ, ಪ್ರಕಾಶ ನಾಶಿ, ಪಮ್ಮಾರ,ಇತರರು ಇದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net