ಶಾಂತಿ, ಸೌಹಾರ್ದತೆಯಿಂದ ಬಕ್ರೀದ್ ಆಚರಿಸಿ

Published on

ಹನೂರು: ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪೊಲೀಸ್ ಠಾಣಾ ವ್ಯಾಪ್ತಿಯ ಹನೂರು ಸೇರಿದಂತೆ ಮಂಗಲ, ಆರ್.ಎಸ್.ದೊಡ್ಡಿ, ಬಂಡಳ್ಳಿ, ಒಡೆಯರಪಾಳ್ಯ ಹಾಗೂ ಇನ್ನಿತರ ಗ್ರಾಮಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದ್ದು, ಪ್ರತಿ ವರ್ಷವೂ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸುವುದರ ಮೂಲಕ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಲಾಗುತ್ತಿದೆ. ಅದರಂತೆಯೇ ಜೂ.7 ರಂದು ನಡೆಯುವ ಬಕ್ರೀದ್ ಹಬ್ಬದಂದು ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಖಂಡರು ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ಮೂಲಕ ಶಾಂತಿ, ಸುವ್ಯವಸ್ಥೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಇದಕ್ಕೆ ಮುಖಂಡರು ಭರವಸೆ ನೀಡಿದರು.

ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ರವಿ, ಎಎಸೈ ಶಿವಕುಮಾರ್, ಸಿಬ್ಬಂದಿ ರಾಘವೇಂದ್ರ, ಮೂರ್ತಿ, ಮುಖಂಡರಾದ ಇಸ್ಮಾಯಿಲ್, ಅಪ್ರೋಜ್‌ಖಾನ್, ಅಮಿನ್, ಅಲ್ತಾಫ್, ಸಮೀವುಲ್ಲಾ, ಅಕ್ಮಲ್‌ಪಾಷ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net