

ಸಾಗರ: ಸಮಾಜದಲ್ಲಿರುವ ನ್ಯೂನತೆಗಳನ್ನು, ಸಮಸ್ಯೆಗಳನ್ನು ಪತ್ರಕರ್ತರು ವರದಿ ಮಾಡಿ ಎಚ್ಚರಿಸುವ ಕೆಲಸ ಮಾಡುತ್ತಾರೆ. ಕಾಯಕವನ್ನು ವ್ಯವಸ್ಥಿತವಾಗಿ ಮುಂದುವರಿಸಬೇಕು ಎಂದು ಸಾಗರ ಪೊಲೀಸ್ ಉಪಾೀಕ್ಷಕ ಗೋಪಾಲಕೃಷ್ಣ ಟಿ.ನಾಯಕ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಸಾಗರ ಶಾಖೆ ಮತ್ತು ಜೋಷಿ ಫೌಂಡೇಷನ್‌ನಿಂದ ಪತ್ರಕರ್ತರ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿ, ವಸ್ತುನಿಷ್ಟ್ಟವಾಗಿ ವರದಿ ಮಾಡುವ ಪತ್ರಕರ್ತರಿಗೆ ರಕ್ಷಣೆ ಇರುತ್ತದೆ ಎಂದು ತಿಳಿಸಿದರು.
ಹಣ ಬಲದಿಂದ ಏನು ಮಾಡಿದರೂ ನಡೆಯುತ್ತದೆ ಎಂದು ಮೆರೆಯುವವರನ್ನು ಪೊಲೀಸ್ ಇಲಾಖೆ ಮಟ್ಟ ಹಾಕುತ್ತದೆ. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಜತೆಗೆ ಕಾನೂನು ಕಾಪಾಡುವುದು ಎಲ್ಲರ ಕರ್ತವ್ಯ. ಅದಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ರೌಡಿಸಂ ಮಾಡಿ ಜೀವಿಸುತ್ತೇನೆ ಎಂದು ಮೆರೆಯುವವರಿಗೆ ಇಲಾಖೆ ತಕ್ಕ ಪಾಠ ಕಲಿಸುತ್ತದೆ ಎಂದರು.
ಪತ್ರಕರ್ತರ ಮೇಲೆ ಸಮಾಜ ಅನೇಕ ನಿರೀಕ್ಷೆಗಳನ್ನು ಇರಿಸಿಕೊಂಡಿರುತ್ತದೆ. ನಿಮ್ಮ ಬರವಣಿಗೆಯಿಂದ ಸಮಾಜ ಸುಧಾರಣೆಯಾಗಬೇಕು. ಸುದ್ದಿ ಹಿಂದೆ ಓಡುವ ಪತ್ರಕರ್ತರು ಆರ್ಥಿಕವಾಗಿ ಸದೃಢರಾಗಿರುವುದಿಲ್ಲ. ಪತ್ರಕರ್ತರ ಮಕ್ಕಳ ಶೈಕ್ಷಣಿಕ ಚಟುವಟಿಕೆಗಾಗಿ ಜೋಷಿ ಫೌಂಡೇಷನ್ ಎರಡು ವರ್ಷದಿಂದ ಉಚಿತ ನೋಟ್ ಪುಸ್ತಕ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು. ಸಾಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್, ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಮ.ಸ.ನಂಜುಂಡಸ್ವಾಮಿ, ಸಂಘದ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ತಾಲೂಕು ಕಾರ್ಯದರ್ಶಿ ಮಹೇಶ್ ಹೆಗಡೆ, ಲೋಕೇಶ ಕುಮಾರ್, ರವಿನಾಯ್ಡು, ಎಂ.ಜಿ.ರಾಘವನ್ ಇತರರಿದ್ದರು.
ಪರಸ್ಪರ ಸಹಕಾರ ಮನೋಭಾವ ಅಗತ್ಯ. ಸಮಾಜದ ಋಣ ತೀರಿಸುವುದು ನಮ್ಮ ಕರ್ತವ್ಯ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಜೋಷಿ ಫೌಂಡೇಷನ್‌ನಿಂದ ಉಚಿತವಾಗಿ ನೋಟ್ ಪುಸ್ತಕ ನೀಡಲಾಗುತ್ತಿದೆ. ಉನ್ನತ ಶಿಕ್ಷಣ ಪಡೆದ ಮಕ್ಕಳು ತಮ್ಮ ಜ್ಞಾನವನ್ನು ಭಾರತ ದೇಶದ ಶ್ರೇಯೋಭಿವೃದ್ಧಿಗೆ ಸದ್ಭಳಕೆ ಮಾಡಿಕೊಳ್ಳುವಂತಾಗಬೇಕು. ಅಬಸೆ ದಿನೇಶಕುಮಾರ್ ಎನ್.ಜೋಷಿ ಜೋಷಿ ಫೌಂಡೇಷನ್ ಮುಖ್ಯಸ್ಥ