

ಭಾಲ್ಕಿ: ಜ್ಞಾನ ಪಡೆಯಲು ಗುರುವಿನ ಅವಶ್ಯಕತೆ ಇದೆ. ನಿಜ ಜ್ಞಾನಕ್ಕಾಗಿ ಸದ್ಗುರುವಿನ ಸೇವೆ ಮಾಡಬೇಕು. ಸದ್ಗುರು ಕೃಪೆಯಿಂದಲೇ ಸುಖ, ಶಾಂತಿ, ನೆಮ್ಮದಿ ಸಾಧ್ಯ ಎಂದು ಚಿದಂಬರಾಶ್ರಮ ಬೀದರ್‌ನ ಸದ್ಗುರು ಶ್ರೀ ಶಿವಕುಮಾರ ಸ್ವಾಮೀಜಿ ನುಡಿದರು.
ಕೊಳಾರ(ಕೆ) ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳ ೨೮ನೇ ಪುಣ್ಯಾರಾಧನೆ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಿಜ ಜ್ಞಾನ ಪಡೆಯಲು ಸದ್ಗರುವಿನ ಕರುಣೆ ಬೇಕು. ಮನುಷ್ಯ ಜನ್ಮ ಪಡೆದದ್ದು ಪರಮಾತ್ಮನ ಜ್ಞಾನ ತಿಳಿಯಲು ಎಂದು ಹೇಳಿದರು.
ಬೀದರ್‌ನ ಗುರುದೇವಾಶ್ರಮ ಹಾಗೂ ಬಬಚ್ಛೆಡಿ ಆಶ್ರಮದ ಶ್ರೀ ಗಣೇಶಾನಂದ ಮಹಾರಾಜರು ಮಾತನಾಡಿ, ಹುಟ್ಟು, ಸಾವು ಎನ್ನುವ ಭವರೋಗದಿಂದ ಪಾರಾಗಲು ಸದ್ಗುರುನಾಥನೆಂಬ ವೈದ್ಯನ ಸಂಗ ಮಾಡಬೇಕು ಎಂದು ಹೇಳಿದರು.
ಬೀದರ್‌ನ ಮಾತೆ ಸಿದ್ದೇಶ್ವರಿ ತಾಯಿ ಸಾನ್ನಿಧ್ಯವಹಿಸಿದ್ದರು. ಸಚ್ಚಿದಾನಂದಾಶ್ರಮ ಬೆಳ್ಳೂರಿನ ಮಾತೆ ಅಮೃತಾನಂದ ಮಯಿ ನೇತೃತ್ವ ವಹಿಸಿದ್ದರು. ಶಾಸಕ ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ಕೊಳಾರ ಮಠದ ಶಂಕ್ರೆಪ್ಪ ಶಂಭು ಪ್ರಾಸ್ತಾವಿಕ ಮಾತನಾಡಿದರು.
ಮಳಚಾಪುರದ ಶ್ರೀ ಸದ್ರೂಪಾನಂದ ಭಾರತಿ ಸ್ವಾಮೀಜಿ, ಹಳೆಂಬರ ಬಾಬು ಮಹಾರಾಜರು, ಮಲ್ಲಿಕಾರ್ಜುನ ಶಂಭು, ವಿಜಯಕುಮಾರ ಕೋಟೆ, ಪ್ರಶಾಂತ ಶರಗಾರ, ಗುರುಪ್ರಸಾದ ಶರಗಾರ, ಅನ್ನಪೂರ್ಣ ಶಂಭು, ನಾಗಭೂಷಣ ಕಮಠಾಣೆ, ಶಿವಾನಂದ ಕುಂಬಾರ ಇತರರಿದ್ದರು.
ನಾವದಗಿ ಗ್ರಾಮದ ಹಿರಿಯ ಮುಖಂಡ ವೈಜಿನಾಥಪ್ಪ ಮಾದಪ್ಪ ದಾಬಶೆಟ್ಟಿಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿದ್ದಾರೂಢರ ಮೂರ್ತಿ ಮತ್ತು ಶ್ರೀ ಸದ್ಗುರು ಡಾ.ಶಿವಕುಮಾರ ಸ್ವಾಮೀಜಿ ಅವರ ತುಲಾಭಾರ ಸೇವೆ ನಡೆಯಿತು. ಶಂಕರೆಪ್ಪ ಶಂಭು ಸ್ವಾಗತಿಸಿ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಶಂಭು ವಂದಿಸಿದರು.