ಶಾಂತಿ, ನೆಮ್ಮದಿಗೆ ದೇಗುಲಗಳು ಸಹಕಾರಿ

IMG-20230207-WA0079
Published on

ಆಲೂರು: ಜನರಲ್ಲಿ ಭಕ್ತಿಯ ಜತೆ ಮಾನಸಿಕ ನೆಮ್ಮದಿ ನೆಲೆಸಲು ದೇವಾಲಯಗಳು ಸಹಕಾರಿಯಾಗಿವೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿ ಜನ್ನಾಪುರ ಗ್ರಾಮದ ಶ್ರೀವೀರಭದ್ರೇಶ್ವರಸ್ವಾಮಿ ಮತ್ತು ಶ್ರೀ ದೇವಿರಮ್ಮ ಅವರ 30ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನಾದಿ ಕಾಲದಿಂದಲೂ ಸಂಪ್ರದಾಯಗಳನ್ನು ಮಾಡಿಕೊಂಡು ಪೂರ್ವಜರು ನಮಗೆ ದಾರಿದೀಪವಾಗಿದ್ದಾರೆ. ಅವರಂತೆ ಈಗಿನ ಯುವಪೀಳಿಗೆ ನಡೆದುಕೊಂಡು ಹೋಗಬೇಕು. ಎಲ್ಲಿ ದೇವಾಲಯಗಳು ಇರುತ್ತವೆಯೋ ಅಲ್ಲಿ ಶಾಂತಿ, ನೆಮ್ಮದಿ ಲಭಿಸುತ್ತದೆ. ಮನಸ್ಸಿಗೆ ಶಾಂತಿ ಸಿಗುವ ಏಕೈಕ ಪುಣ್ಯಕ್ಷೇತ್ರವೆಂದರೆ ಅದು ದೇಗುಲಗಳು ಎಂದು ಅಭಿಪ್ರಾಯಪಟ್ಟರು.

ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕಾಪ್ರಸಾದ್ ಮಾತನಾಡಿ, ಆರೋಗ್ಯಪೂರ್ಣ ಸಮಾಜಕ್ಕೆ ಮಠ, ಮಂದಿರಗಳು ಬೇಕು. ವಿದೇಶಿಗರೂ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಗ್ರಾಮದ ಜನರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಕ್ಷೇತ್ರದ ಶಾಸಕರು ವೀರಶೈವ ಸಮಾಜದ ಜನರು ವಾಸಿಸುತ್ತಿರುವ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಬಿಜೆಪಿ ಮುಖಂಡರಾದ ಸಿಮೆಂಟ್ ಮಂಜುನಾಥ್, ಡಾ.ಜಯರಾಜ್, ವೀರಶೈವ ಸಮಾಜದ ತಾಲೂಕು ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ಕಾರ್ಯದರ್ಶಿ ಎಸ್.ಎಸ್.ಶಿವಮೂರ್ತಿ, ಖಜಾಂಚಿ ಟೀಕರಾಜ್, ಹೈಕೋರ್ಟ್ ವಕೀಲ ಮಂಜುನಾಥ್, ತಾಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ನೇತ್ರಾವತಿ ರಾಜಶೇಖರ್, ಅಣ್ಣಪ್ಪ, ಪರಮೇಶ್ ಇತರರು ಹಾಜರಿದ್ದರು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಎಲ್ಲರಿಗೂ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net