

ಚಿಕ್ಕಮಗಳೂರು: ನಗರದ ೧೮ನೇ ವಾರ್ಡಿನ ಶಾಂತಿನಗರದಲ್ಲಿ ಸಾರ್ವಜನಿಕರ ನಡುವೆ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿರುವ ಕಿಡಿಕೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಶಾಂತಿನಗರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಶನಿವಾರ ಎಸ್‌ಪಿ ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹಿತರಕ್ಷಣಾ ಸಮಿತಿ ಮುಖಂಡ ರಾಜೇಶ್, ಇತ್ತೀಚೆಗೆ ಬಡಾವಣೆಯಲ್ಲಿ ಕಳ್ಳತನ, ಮಾದಕ ವಸ್ತು, ಗೂಂಡಾಗಿರಿ ಪ್ರಕರಣ ಹೆಚ್ಚಾಗುತ್ತಿದೆ. ಸಣ್ಣ ಜಗಳವಾದರೂ ಕೆಲವೇ ನಿಮಿಷಗಳಲ್ಲಿ ವಿವಿಧ ಬಡಾವಣೆಗಳ ಪುಡಿ ರೌಡಿಗಳ ಗುಂಪೊಂದು ಶಾಂತಿನಗರಕ್ಕೆ ಬಂದು ಶಾಂತಿ ಕದಡಿ ಕೋಮುಗಲಭೆ ನಡೆಸುತ್ತಿದ್ದಾರೆ ಎಂದರು.
ಪ್ರತಿನಿತ್ಯವು ಪುಡಿರೌಡಿಗಳ ಗುಂಪೊಂದು ಹುಡುಗಿಯರ ಬಳಿ ಅಸಭ್ಯವಾಗಿ ವರ್ತಿಸುವುದು, ಬೈಕ್ ವೀಲಿಂಗ್ ಮಾಡುವುದು, ಇದನ್ನು ಪ್ರಶ್ನಿಸಿದರೆ ಏಕಾಏಕಿ ಹುಡುಗರ ಗುಂಪುಗಳು ಒಟ್ಟಾಗಿ ದಾಳಿ ಮಾಡುತ್ತಿವೆ. ಈ ರೀತಿಯ ಸಾಕಷ್ಟು ಪ್ರಕರಣಗಳು ಈ ಭಾಗದಲ್ಲಿ ನಡೆಯುತ್ತಿವೆ ಎಂದು ಹೇಳಿದರು.
ನಗರಸಭೆ ಸದಸ್ಯ ಮಣಿಕಂಠ ಮಾತನಾಡಿ, ಶಾಂತಿನಗರದಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಕಾಣದ ಕೈಗಳು ಪ್ರಚೋದನೆ ಮಾಡುತ್ತಿರುವುದು ಕಂಡುಬರುತ್ತಿದೆ. ಡ್ರಗ್ಸ್ ಮಾಫಿಯಾ ವಿಪರೀತವಾಗಿದೆ. ಹೆಣ್ಣು ಮ ಕ್ಕಳು ರಸ್ತೆಗಳಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ.ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ನಿವಾಸಿಗಳ ಬದುಕು ಕಷ್ಟಕರವಾಗಲಿದೆ ಎಂದರು.
ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಶಾಂತಿನಗರ ಬಡಾವಣೆಯಲ್ಲಿ ಶಾಂತಿ ಕದಡುವವರ ವಿರುದ್ಧ ಕ್ರಮ ಜರುಗಿಸಲು ಪ್ರತಿನಿತ್ಯವು ಬೀಟ್ ಪೊಲೀಸ್ ನೇಮಿಸಬೇಕು. ತಾತ್ಕಾಲಿಕವಾಗಿ ಪೊಲೀಸರು ಬಡಾವಣೆಯಲ್ಲೇ ತಂಗುವಂತೆ ವ್ಯವಸ್ಥೆ ಕಲ್ಪಿಸಿ, ಕಿಡಿಕೇಡಿಗಳನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳಾದ ಗಣೇಶ್, ನವೀನ್, ವೆಂಕಟೇಶ್, ಸುಂದರ್, ಮಂಜುಳಾ, ರಾಜು, ಜಯಂತಿ, ಪ್ರೇಮ ಮತ್ತಿತರರಿದ್ದರು.