

ಚಿಕ್ಕಬಳ್ಳಾಪುರ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪ್ರೌಢಶಾಲೆಯ ತರಗತಿಗಳು ಮರು ಪ್ರಾರಂಭವಾಗಿದ್ದು, ಜಿಲ್ಲಾಧಿಕಾರಿ ಆರ್.ಲತಾ ಮತ್ತು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಜತೆಗೆ ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳನ್ನೊಂಡ ತಂಡ ಸೋಮವಾರ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಅಹಿತಕರ ಘಟನೆಗಳು ಸಂಭವಿಸದಿರಲು ಮುಂಜಾಗ್ರತಾ ಕ್ರಮವಾಗಿ ಶಾಲೆಗಳಲ್ಲಿ ಬಂದೋ ಬಸ್ತ್‌ಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಫೆ.19 ರವರೆಗೆ ಎಲ್ಲ ಪ್ರೌಢಶಾಲೆಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ತಾಲೂಕು ಮತ್ತು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳಿಗೆ ಸಮವಸ್ತ್ರ ಸಂಹಿತೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಜವಾಬ್ದಾರಿ ವಹಿಸಲಾಗಿದೆ.
ನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆ, ಬಾಗೇಪಲ್ಲಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಆರ್.ಲತಾ, ಚಿಂತಾಮಣಿ ತಾಲೂಕಿನ ವಿವಿಧ ಶಾಲೆಗಳಿಗೆ ಸಂತೋಷ್ ಕುಮಾರ್ ನೇತೃತ್ವದ ತಂಡವು ಭೇಟಿ ನೀಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲೂಕಿನ ವಿವಿಧೆಡೆ ತೆರಳಿ, ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಯಾರೇ ಆಗಲಿ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು. ವದಂತಿ ಹಬ್ಬಿಸಿ, ಸೌಹಾರ್ದಯುತ ವಾತಾವರಣ ಹದಗೆಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಡಿಸಿ: ಶಾಲಾ ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಓದುವ, ಪರೀಕ್ಷೆ ಸಿದ್ಧತೆಯ ಬಗ್ಗೆ ಜಿಲ್ಲಾಧಿಕಾರಿ ಆರ್.ಲತಾ ಸಲಹೆ ಸೂಚನೆ ನೀಡಿದರು. ಕರೊನಾ, ಸಮವಸ್ತ್ರ ಸಂಹಿತೆ ವಿವಾದ ಹಿನ್ನೆಲೆಯಲ್ಲಿ ಪ್ರೌಢಶಾಲೆಯ ತರಗತಿಗಳಿಗೆ ತಾತ್ಕಾಲಿವಾಗಿ ರಜೆ ಘೋಷಿಸಲಾಗಿತ್ತು. ಇದೀಗ ಮರು ಪ್ರಾರಂಭವಾಗಿವೆ. ಇದೇ ವೇಳೆ ವಿದ್ಯಾರ್ಥಿಗಳು ಪರೀಕ್ಷೆಯ ಕಡೆ ಗಮನಹರಿಸಿ ಹೆಚ್ಚಿನ ಅಂಕ ಗಳಿಸಬೇಕು. ಅದರಲ್ಲೂ 10ನೇ ತರಗತಿ ವಿದ್ಯಾರ್ಥಿಗಳು ವಿಶೇಷ ಗಮನಹರಿಸಿ, ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರವು ರಾಜ್ಯದಲ್ಲಿ ಜಿಲ್ಲಾವಾರು ಪ್ರಥಮ ಸ್ಥಾನಗಳಿಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಈಗಾಗಲೇ ಪರೀಕ್ಷೆಯ ಪೂರ್ವ ತಯಾರಿ, ಪಠ್ಯಕ್ರಮ ಅಭ್ಯಾಸ ಮತ್ತು ಸರಳ ಕಲಿಕಾ ವಿಧಾನಗಳ ಬಗ್ಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ಒಂದು ವೇಳೆ ಗೊಂದಲಗಳಿದ್ದಲ್ಲಿ ಶಿಕ್ಷಕರ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಆಂಜನೇಯಗೌಡ, ತಹಸೀಲ್ದಾರ್ ರವಿ, ಬಾಗೇಪಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ತಾಪಂ ಇಒ ಮಂಜುನಾಥ ಸ್ವಾಮಿ ಮತ್ತಿತರರು ಇದ್ದರು.