

ಕೆಂಭಾವಿ: ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪ್ರೀತಿಗೆ ಪಾತ್ರರಾಗುವ ಜತೆಗೆ ಶಾಂತಗೌಡ ಪಾಟೀಲ್ ಮಾಡಿರುವ ಸೇವಾ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಪಟ್ಟಣದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ಮತ್ತು ಅನುದಾನಿತ, ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ಇದೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಕೊರತೆ ನೀಗಿಸಲಾಗುವುದು ಎಂದು ಹೇಳಿದರು.
ಶಾಂತಗೌಡ ಪಾಟೀಲ್ ಸನ್ಮಾನ ಸ್ವೀಕರಿಸಿ, ಸುರಪುರ ಮತ್ತು ಶಹಾಪುರ ಶಾಸಕರ ಸಹಕಾರದಿಂದ ನನ್ನ ಸೇವಾ ಅವಧಿಯಲ್ಲಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರ ಸಹಕಾರದಿಂದ ಶ್ರಮಿಸಿದ್ದೇನೆ ಎಂದು ಹೇಳಿದರು.
ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಖಾದರ್ ಪಟೇಲ್ ಮಾತನಾಡಿದರು. ಹಿರಿಯ ಮುಖಂಡ ನಿಂಗನಗೌಡ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್‌ಪಾಟೀಲ್, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಚಿಂಚೋಳಿ, ಪ್ರಮುಖರಾದ ಸಂಜೀವರಾವ್ ಕುಲಕರ್ಣಿ, ವಾಮನರಾವ್ ದೇಶಪಾಂಡೆ, ಶಿವಮಾಂತ ಚಂದಾಪುರ, ಶರಣಬಸ್ಸು ಡಿಗ್ಗಾವಿ, ಅಮಿನರೆಡ್ಡಿಗೌಡ ಕಿರದಳ್ಳಿ, ಅಶೋಕ ಸಾಹು ಸೊನ್ನದ, ಅಧಿಕಾರಿಗಳಾದ ವಸಂತ ಶಾಬಾದಕರ್, ಮಲ್ಲಪ್ಪ ದೊಡಮನಿ, ಯಲ್ಲಪ್ಪ ಚಂದನಕೇರಿ ಇತರರಿದ್ದರು. ಶಿವಶರಣಪ್ಪ ಶಿರೂರ ನಿರೂಪಣೆ ಮಾಡಿದರು. ಶರಣಬಸವ ಗೋನಾಲ ಸ್ವಾಗತಿಸಿದರು. ಶ್ರೀಶೈಲ ಪಾಸೋಡಿ ವಂದಿಸಿದರು.