

ಬಾಗಲಕೋಟೆ: ಜಿಲ್ಲೆಯಾದ್ಯಂತ ಜುಲೈ 29 ರಂದು ಆಚರಿಸಿಲ್ಪಡುವ ತ್ಯಾಗ, ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮೊಹರಂ ಹಬ್ಬದ ಆಚರಣೆ ಕುರಿತು ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅನಾದಿಕಾಲದಿಂದಲೂ ಆಚರಿಸುತ್ತಾ ಬಂದಿರುವ ಈ ಹಬ್ಬದ ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಾಗಲಕೋಟೆ ಜಿಲ್ಲೆಯಾದ್ಯಂತ ಹಿಂದೂ-ಮುಸ್ಲಿಂ ಭಾಂದವರು ಗ್ರಾಮ, ನಗರ ಪಟ್ಟಣಗಳಲ್ಲಿ ಮೊಹರಂ ಆಚರಿಸುತ್ತಿದ್ದು, ಈ ಹಬ್ಬದಲ್ಲಿ ಬಹುಪಾಲು ಹಿಂದೂಗಳು ಭಾಗವಹಿಸುತ್ತಿರುವದರಿಂದ ಇದು ಭಾವೈಕ್ಯತೆ ಹಬ್ಬವಾಗಿದೆ ಎಂದರು.
ಬಾಲಕೋಟೆಯಲ್ಲಿ ಐತಿಹಾಸಿಕ ಹಿನ್ನಲೆಯಿದೆ. ಮೊಹರಂದಲ್ಲಿ ಜನಪದಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೈಯಲ್ಲಿ ಕೋಲು ಹಿಡಿದು ಹೆಜ್ಜೆ ಹಾಕುವ ಮೊಹರಂ ಗೀತೆಗಳನ್ನು ಹಾಡಲಾಗುತ್ತಿದೆ. ಈ ಹಬ್ಬದ ನಿಮಿತ್ಯ ಹಾಗೂ ಮೊಹರಂ ಕುಣಿತಗಳಿಗಾಗಿ ಪ್ರದರ್ಶನ ನಡೆಯಲಿವೆ. ಆದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಕೊಡದೇ ಶಾಂತರೀತಿಯಿಂದ ಹಬ್ಬ ಆಚರಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿಗಳು ಕರೆ ನೀಡಿದರು.
ಮೊಹರಂ ಹಬ್ಬದ ನಿಮಿತ್ಯ ಜಿಲ್ಲೆಯಾಧ್ಯಂತ 500 ಜನ ಹೋಮ್‍ಗಾಡ್ಸ್, ಪೊಲೀಸ್ ಸಿಬ್ಬಂದಿ, ಎರಡು ಕೆಎಸ್‍ಆರ್‍ಪಿ, ಸ್ಟ್ರೈಕಿಂಗ್ ಪೋರ್ಸ್ ಹಾಗೂ ಸ್ವಯಂ ಸೇವಕರನ್ನು ಸಹ ನೇಮಿಸಲಾಗಿದೆ. ಅಲ್ಲದೇ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕೂಡಾ ಹಾಕಲಾಗಿದ್ದು, ಇದರ ವೀಕ್ಷಣೆಗೆ ಇಬ್ಬರು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇವರು ದಿನ 24 ಗಂಟೆಗಳ ಕಾಲ ವೀಕ್ಷಣೆ ಮಾಡಲಿದ್ದಾರೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವಾಯ್‍ಎಸ್ಪಿ ಪ್ರಶಾಂತ ಮನ್ನಳ್ಳಿ ಸೇರಿದಂತೆ ಸಮುದಾಯ ಭಾಂದವರು ಉಪಸ್ಥಿತರಿದ್ದರು.
ಜಿಲ್ಲೆಯಾದ್ಯಂತ ಜುಲೈ 29 ರಂದು ಆಚರಿಸಲ್ಪಡುವ ಮೊಹರಂ ಹಬ್ಬದ ನಿಮಿತ್ಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಬಾಗಲಕೋಟೆ ತಾಲೂಕಿನಾದ್ಯಂತ ಜುಲೈ 27ರ ಬೆಳಿಗ್ಗೆ 6 ರಿಂದ ಜುಲೈ 30ರ ಬೆಳಿಗ್ಗೆ 6 ವರೆಗೆ ಹಾಗೂ ಜಿಲ್ಲೆಯಾದ್ಯಂತ ಜುಲೈ 28ರ ಬೆಳಿಗ್ಗೆ 6 ರಿಂದ ಜುಲೈ 30ರ ಬೆಳಿಗ್ಗೆ 6 ವರೆಗೆ ಬೀರಿ, ಬ್ರ್ಯಾಂಡಿ ಹಾಗೂ ಲಿಕ್ಕರ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.