ಶಹಾಬಾದ್ ಫರ್ಸಿಗೆ ಬ್ರ್ಯಾಂಡ್ ಸ್ಪರ್ಶ

DC meeting photos (2)
Published on

ಕಲಬುರಗಿ: ರಾಜ್ಯ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಯ ಪ್ರಸಿದ್ಧ `ಶಹಾಬಾದ್ ಫರ್ಸಿ' ಆಯ್ಕೆಯಾಗಿದ್ದು, ಈ ಕಲ್ಲುಗಳಿಗೆ ಬ್ರ್ಯಾಂಡ್ ನೀಡಿ ಉತ್ತಮ ಮಾರುಕಟ್ಟೆ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೈಗಾರಿಕೆ ಕೇಂದ್ರ, ಲೀಡ್ ಬ್ಯಾಂಕ್, ಕೆಎಸ್‌ಎಫ್‌ಸಿ ಅಧಿಕಾರಿಗಳು, ಕೆಕೆಸಿಸಿಐ, ಕಾಸಿಯಾ ಪ್ರತಿನಿಧಿಗಳು ಹಾಗೂ ಕಲ್ಲು ಗಣಿಗಾರಿಕೆಗಳ ಅಸೋಸಿಯೇಷನ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಶಹಾಬಾದ್ ಫರ್ಸಿಗಳಿಗೆ ತಂತ್ರಜ್ಞಾನ ನೆರವಿನಿಂದ ಹೊಸ ವಿನ್ಯಾಸದೊಂದಿಗೆ ದೇಶ-ವಿದೇಶದಲ್ಲಿ ವ್ಯಾಪಕ ಮಾರುಕಟ್ಟೆ ಕಲ್ಪಿಸುವ ಮೂಲಕ ರಫ್ತು ಹೆಚ್ಚಿಸಲಾಗುವುದು. ಕಲ್ಲು ಗಣಿ ಮಾಲೀಕರಿಗೆ ಸರ್ಕಾರ ಎಲ್ಲ ರೀತಿಯ ಸಹಾಯ-ಸಹಕಾರ ನೀಡಲಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಥಳೀಯವಾಗಿ ಲಭ್ಯವಾಗುವ ಕಲ್ಲುಗಳನ್ನು ಗುಣಮಟ್ಟದಿಂದ ಪೂರೈಕೆ ಮಾಡಬೇಕು ಎಂದು ಹೇಳಿದರು.

ಕಲ್ಲು ಗಣಿಗಾರಿಕೆ ಮಾಲೀಕರು ಮಾತನಾಡಿ, ಗಣಿಗಾರಿಕೆ ಪರವಾನಗಿ ಪ್ರಕ್ರಿಯೆ ಸರಳೀಕರಣ ಮಾಡಬೇಕು. ವಿದ್ಯುತ್ ದರ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ನಿಮ್ಮೆಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಪ್ರಯತ್ನ ಮಾಡುವುದಾಗಿ ಡಿಸಿ ಪ್ರತಿಕ್ರಿಯಿಸಿದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ಗಜಾನಂದ ಬಾಳೆ, ಕೈಗಾರಿಕಾ ಕೇಂದ್ರದ ಜಿಲ್ಲಾ ಜಂಟಿ ನಿರ್ದೇಶಕ ಬಿ.ಸತೀಷಕುಮಾರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರೇಕರ್, ಕೆಎಸ್‌ಎಫ್‌ಸಿ ಶಾಖಾ ವ್ಯವಸ್ಥಾಪಕ ಹುಕುಂಚಂದ್ ಪವಾರ್, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಕಾಸಿಯಾ ಪ್ರತಿನಿಧಿ ಭೀಮಾಶಂಕರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net