ಶಹಾಬಾದ ಇಎಸ್‌ಐ ಆಸ್ಪತ್ರೆ ಆರಂಭಿಸಲು ಸಂಸದ ಶಾಸಕರು ವಿಫಲ : ಅರವಿಂದ ಚವ್ಹಾಣ ಆಕ್ರೋಶ

IMG-20230809-WA0011
Published on

ಸಂಸದ ಡಾ.ಜಾಧವ ಶಾಸಕ ಮತ್ತಿಮಡು ವಿರುದ್ಧ ಜಿಪಂ ಮಾಜಿ ಸದಸ್ಯ ಚವ್ಹಾಣ ಕಿಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯ ಶಹಾಬಾದ ಪಟ್ಟಣದಲ್ಲಿನ ನವಿಕೃತಗೊಂಡ ಇಎಸ್‌ಐ ಆಸ್ಪತ್ರೆಯನ್ನು ಆರಂಭಿಸುವಲ್ಲಿ ಸಂಸದ ಡಾ.ಉಮೇಶ ಜಾಧವ ಹಾಗೂ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಸಂಪೂಣ ವಿಫಲರಾಗಿದ್ದಾರೆ  ಎಂದು ಜಿಪಂ ಮಾಜಿ ಸದಸ್ಯರಾಗಿರುವ ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ ಗಂಭೀರವಾಗಿ ಆರೋಪಿಸಿದರು.
ಕೋವಿಡ್ ಸೆಂಟರ್ ಆಗಿ, ಬಳಿಕ ಜನರಿಗೆ ಚಿಕಿತ್ಸೆ ನೀಡಲು ಬಳಕೆಯಾಗಲಿದೆ ಎಂದು ಹೇಳಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಳು ಬಿದ್ದ ಇಎಸ್‌ಐ ಆಸ್ಪತ್ರೆಯನ್ನು ನವೀಕರಣ ಮಾಡಲು ೧೦ ಕೋ.ರೂ.ಗೂ ಹೆಚ್ಚಿನ ಹಣವನ್ನು ಬಳಕೆ ಮಾಡಲಾಯಿತು. ಆದರೆ, ಇದುವರೆಗೂ ಜನರ ಉಪಯೋಗಕ್ಕೆ ಬಂದಿಲ್ಲ. ಇದಕ್ಕೆ ಶಾಸಕರೇ ಹೊಣೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕೋವಿಡ್-೧೯ ಮೂರನೇ ಅಲೆ ಎದುರಿಸಲು ಶಹಾಬಾದ ಇಎಸ್‌ಐ ಅಸ್ಪತ್ರೆಯ ನವೀಕರಣಗೊಳಿಸಿ ಆಕ್ಸಿಜನ್ ಘಟಕ ಸ್ಥಾಪನೆ ಇತ್ಯಾದಿ ಕಾಮಗಾರಿಗೆ  ೧೦ ಕೋ.ರೂ. ಲೋಕೋಪಯೋಗಿ ಇಲಾಖೆಗೆ ಬಿಡುಗಡೆಗೊಳಿಸಿ ನೆಪ ಎಂಬAತೆ ಕೆಲಸ ಮಾಡಲಾಗಿದೆ. ಅದನ್ನು ನೋಡಿದಾಗ ಹೊರಗಿನಿಂದ ತಳಕು, ಒಳಗಡೆ ಹುಳುಕು ಎನ್ನುವಂತಿದೆ. ಹಾಳು ಬಿದ್ದಿದ್ದ ಕಟ್ಟಡಕ್ಕೆ ಸುಣ್ಣ  ಬಣ್ಣ ಬಳಿಯಲು ಅಷ್ಟೊಂದು ಹಣ ಖರ್ಚು ಮಾಡಿದ್ದರ ಅರ್ಥ ಏನು ಎಂಬುದು ಗ್ರಾಮೀಣ ಶಾಸಕರು ಹೇಳಲಿ ಎಂದು ಪ್ರಶ್ನಿಸಿದರು.
೨೦೨೧ ಡಿಸೆಂಬರ್‌ದಲ್ಲಿ ನವೀಕರಣ ಮುಗಿದಿದ್ದರೂ, ಯಾಕೆ ಉದ್ಘಾಟನೆಗೊಳ್ಳಲಿಲ್ಲ?.  ಕಾರ್ಮಿಕ ಇಲಾಖೆಗಾಗಲಿ ಅಥವಾ ಆರೋಗ್ಯ ಇಲಾಖೆಗಾಗಲಿ ಕಟ್ಟಡ ಹಸ್ತಾಂತರಗೊAಡಿಲ್ಲ.  ಇದು ನೋಡಿದಾಗ ಆಸ್ಪತ್ರೆಯ ಬೀಗ ತೆರೆದರೆ ಅಕ್ರಮದ ವಾಸನೆ ಜನರ ಮೂಗಿಗೆ ಬಡೆಯಬಹುದು ಎಂಬ ಭಯ  ಶಾಸಕರನ್ನು ಕಾಡುತ್ತಿದೆ ಎಂದು ಆರೋಪಿಸಿದರು.
ಶಹಾಬಾದ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸುವ ನೆಪದಲ್ಲಿ ಅಂದಾಜು ೧೦ ಕೋ.ರೂ.ಗಳನ್ನು ಶಾಸಕರು ದುರುಪಯೋಗಪಡಿಸಿಕೊಂಡಿದ್ದಾರೆ. ಮಹಾಮಾರಿ ಕರೊನಾ ಲಕ್ಷಾಂತರ ಜನರ ಬದುಕನ್ನೇ ಕಿತ್ತುಕೊಂಡಿತು. ಕೆಲವರ ಪಾಲಿಗೆ ಇದೇ ಕರೊನಾ ಹಣ ಲೂಟಿ ಮಾಡಲು ದಾರಿ ಮಾಡಿಕೊಟ್ಟಿತು ಎಂದು ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ ದೂರಿದರು.
ಈ ಕಟ್ಟಡದ ನವೀಕರಣದ ಅಕ್ರಮ ಹಾಗೂ ಕಳಪೆ ಕಾಮಗಾರಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸೂಕ್ತ ತನಿಖೆ ನಡೆಸಿ, ಲೂಟಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಚವ್ಹಾಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ  ಶರಣಗೌಡ, ಶಿವಕುಮಾರ, ನಾರಾಯಣ ರಾಠೋಡ್, ಯುವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net