

ಶಹಾಪುರ: ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ಈ ಅವಧಿಯಲ್ಲಿ ಇದುವರೆಗೂ ೫೦೦ ಕೋಟಿ ರೂಗೂ ಅಧಿಕ ಅನುದಾನ ಪಡೆಯಲಾಗಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಇಲ್ಲಿನ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ನಗರದ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ೭೦ ಕೋಟಿ ರೂ. ಅನುದಾನ ಮತ್ತು ಈ ಬಾರಿ ಸರಬರಾಜಿಗಾಗಿ ೧೦೦ ಕೋಟಿ ರೂ. ಅನುದಾನ ಬಿಡುಗೊಳಿಸಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಸಗರ ಗ್ರಾಮದ ಡಾ.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ೨೨ ಕೋಟಿ ರೂ. ಅನುದಾನ, ನೂತನ ತಾಲೂಕು ಕಚೇರಿ ಪ್ರಜಾಸೌಧಕ್ಕಾಗಿ (ಮಿನಿ ವಿಧಾನ ಸೌಧ) ೨೦ ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ ಎಂದರು.
ತಾಲೂಕಿ ಶಿರವಾಳ ಗ್ರಾಮದ ಹಲವಾರು ಪ್ರಾಚ್ಯವಸ್ತು ದೇವಾಲಯಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗುವುದು. ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್, ೩ ಹಂತದಲ್ಲಿ ಸಮಗ್ರ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ೭೫ ಕೋಟಿ ರೂ.ಅನುದಾನ ಕಲ್ಪಿಸಿದ್ದಾರೆ ಎಂದು ಎಂದರು.
ನಗರದ ೧೦೦ ಹಾಸಿಗೆ ಆಸ್ಪತ್ರೆಯನ್ನು ೧೫೦ ಹಾಸಿಗೆಗೆ, ಕೆಂಭಾವಿ, ದೋರನಹಳ್ಳಿ ಗ್ರಾಮದ ೩೦ ಹಾಸಿಗೆಗಳ ಆಸ್ಪತ್ರೆಗಳನ್ನು ೫೦ ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದಿಸಲಾಗಿದೆ. ಇನ್ನೂ ಗೋಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು. ಈ ಎಲ್ಲ ಕಾಮಾಗಾರಿಗಳನ್ನು ಕೆಕೆಆರ್‌ಡಿಬಿ ಅನುದಾನದಲ್ಲಿ ಮೂರು ವರ್ಷಗಳಲ್ಲಿ ಮುಗಿಸಲು ತಿರ್ಮಾನಿಸಲಾಗಿದೆ.
ನಗರದ ಒಳಚರಂಡಿ ಕಾಮಗಾರಿಗೆ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ೨೯೨.೯೮ ಕೋಟಿ ರೂ. ಆಡಳತಾತ್ಮಕ ಅನುಮೋದನೆ ದೊರೆತಿದೆ. ಇದರಲ್ಲಿ ನಗರದಲ್ಲಿ ಒಟ್ಟು ೨೦೦೯ ಪೈಪ್‌ಲೈನ್ ಅಳವಡಿಕೆ, ೭೫೦೦ ಮ್ಯಾನ್ ಹೋಲ್‌ಗಳು ಸೇರಿ ಒಟ್ಟು ೧೩, ೫೦೦ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಇದಾಗಿದೆ ಎಂದು ಸಚಿವ ದರ್ಶನಾಪುರ ಹೇಳಿದರು.