

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಶಿಬಿರದಲ್ಲಿ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಗೆ ಶಿಫಾರಸುಗೊಂಡಿದ್ದ ರೋಗಿಗಳಿಗೆ ಡಾ.ಎನ್.ಎಸ್. ಇಂದ್ರೇಶ್ ಅವರು ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಿ ಮನೆಗಳಿಗೆ ಕಳುಹಿಸಿಕೊಟ್ಟರು.
ಆರೋಗ್ಯ ಶಿಬಿರದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಸೇರಿದಂತೆ ಹರ್ನಿಯಾ, ಗಂಟಲು, ಕಿವಿ, ಮೂಗು, ಶ್ವಾಸಕೋಶ, ನರ, ಮೂಲವ್ಯಾಧಿ. ಮೂತ್ರಪಿಂಡ, ಪಿತ್ತಜನಕಾಂಗ, ಗರ್ಭಕೋಶ, ಸ್ತನಕ್ಯಾನ್ಸರ್ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ರೋಗಿಗಳಿಗೆ ಆದಿಚುಂಚನಗಿರಿ ಸಂಶೋಧನಾ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಯಾನಪೋಯ ಆಸ್ಪತ್ರೆ ಮಂಗಳೂರು ಹಾಗೂ ಬೆಂಗಳೂರು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಕಣ್ಣಿನ ಶಸ್ತ್ರಚಿಕಿತ್ಸೆ ಹೊರತು ಪಡಿಸಿ ಉಳಿದಂತೆ ಅನೇಕ ಕಾಯಿಲೆಗಳ ಶಸ್ತ್ರ ಚಿಕಿತ್ಸೆ ಹಾಗೂ ವಿವಿಧ ಬಗೆಯ ಸ್ಕ್ಯಾನಿಂಗ್‌ಗಳಿಗೆ ಸ್ವಂತ ಹಣ ಪಾವತಿಸಿ ಶಸ್ತ್ರಚಿಕಿತ್ಸೆ ಕೊಡಿಸುವ ಮೂಲಕ ಆರೋಗ್ಯ ಶಿಬಿರದ ಉದ್ದೇಶವನ್ನು ಯಶಸ್ವಿಗೊಳಿಸಿದರು.
ಶನಿವಾರ ಬೆಳಗ್ಗೆ ಎರಡು ಬಸ್‌ಗಳಲ್ಲಿ ಆಸ್ಪತ್ರೆಯಿಂದ ಪಾಂಡವಪುರ ಪಟ್ಟಣಕ್ಕೆ ಆಗಮಿಸಿದ ರೋಗಿಗಳ ಯೋಗಕ್ಷೇಮ ವಿಚಾರಿಸಿದ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಅವರು ಆರೋಗ್ಯದ ವಿಚಾರವಾಗಿ ಕೆಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಹಾಗೂ ದೈನಂದಿನ ಚಟುವಟಿಕೆ ಮತ್ತು ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಿದರು. ಬಳಿಕ ಎಲ್ಲರಿಗೂ ಹಣ್ಣು ಹಂಪಲು ವಿತರಿಸಿ, ಗ್ರಾಮಗಳಿಗೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸಿದರು.
ಬಿಜೆಪಿ ಮುಖಂಡರಾದ ಬಳಘಟ್ಟ ಅಶೋಕ್, ನಂದೀಶ್ ಕುಂಟೆ, ಚೇತನ್, ಚಿಕ್ಕಮರಳಿ ನವೀನ್‌ಕುಮಾರ್ ಇತರರು ಇದ್ದರು.