

ಚಿತ್ರದುರ್ಗ: ಜಿಲ್ಲಾಸ್ಪತ್ರೆಗೆ ಕಳಪೆ ಉಪಕರಣಗಳು ಪೂರೈಕೆಯಾಗಿವೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಬೆನ್ನಲ್ಲೇ ಇತ್ತೀಚೆಗೆ ಕೀಲು ಮೂಳೆ ವಿಭಾಗದ ಶಸ್ತ್ರಚಿಕಿತ್ಸಾ ಘಟಕದಲ್ಲಿ ರೋಗಿ ಮಲಗಿದ್ದ ಟೇಬಲ್ ಮುರಿದುಬಿದ್ದಿರುವುದೇ ಇದಕ್ಕೆ ಪುರಾವೆಯಾಗಿದೆ.
ಕೆಲ ತಿಂಗಳ ಹಿಂದೆ ಶಸ್ತ್ರಚಿಕಿತ್ಸಾ ಟೇಬಲ್, ಅದಕ್ಕೆ ಸಂಬಂಧಿಸಿದ ವಿದ್ಯುತ್ ದೀಪಗಳು ಸೇರಿ ಇನ್ನಿತರ ಅಗತ್ಯ ವಸ್ತುಗಳು ಜಿಲ್ಲಾಸ್ಪತ್ರೆಗೆ ಪೂರೈಕೆಯಾಗಿದ್ದವು. ಅವೆಲ್ಲವೂ ಕಳಪೆ ಗುಣಮಟ್ಟದ್ದಾಗಿವೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ, ಪರಿಕರಗಳು ಗುಣಮಟ್ಟದಿಂದ ಕೂಡಿವೆ ಎಂಬ ಪತ್ರಕ್ಕೆ ಜಿಲ್ಲಾ ಶಸತ್ತಚಿಕಿತ್ಸಕರ ಸಹಿಯೂ ಬಿದ್ದಿದೆ ಎಂಬ ಮಾಹಿತಿಯೂ ಇತ್ತು.
ಇತ್ತೀಚೆಗೆ ತೊಡೆಯ ಮೂಳೆ ಮುರಿತದಿಂದ ಹನುಮಂತಪ್ಪ ಎಂಬುವರು ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿ ರಾಡ್ ಅಳವಡಿಸಬೇಕಿತ್ತು. ಮೂಳೆ ತಜ್ಞರು ಶಸ್ತ್ರ ಚಿಕಿತ್ಸೆ ನಡೆಸುವಾಗಲೇ ರೋಗಿಯನ್ನು ಮಲಗಿಸಿದ್ದ ಟೇಬಲ್ ಮುರಿದಿದೆ. ತಕ್ಷಣ ವೈದ್ಯರು, ಶುಶ್ರೂಷಕಿಯರು ರೋಗಿಯನ್ನು ಕೆಳಗೆ ಬೀಳದಂತೆ ರಕ್ಷಿಸಿದ್ದಾರೆ. ಒಂದು ವೇಳೆ ಕೆಳಗೆ ಬಿದ್ದಿದ್ದರೆ ರೋಗಿಗೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಶಸ್ತ್ರಚಿಕಿತ್ಸೆ ಕೊಠಡಿಯೊಳಗೆ ನಡೆದ ಈ ಘಟನೆ ಬಳಿಕ ವಸ್ತುಗಳ ಗುಣಮಟ್ಟ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಕೂಡ ಕೇಳಿಬಂದಿದೆ.
ಟೇಬಲ್ ಬಿದ್ದಿದೆ ಎಂಬುದೇ ಅಸತ್ಯ: ಶಸ್ತ್ರಚಿಕಿತ್ಸೆ ವೇಳೆ ಟೇಬಲ್ ಬಿದ್ದಿದೆ ಎಂಬುದಾಗಿ ತಪ್ಪು ಮಾಹಿತಿ ಹರಡಿದೆ. ರೋಗಿ 120 ಕೆ.ಜಿ. ತೂಕ ಇದ್ದ ಕಾರಣ ಆಪರೇಷನ್ ನಡೆಸುವಾಗ ಸ್ವಲ್ಪ ಜಗ್ಗಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ. ನಾನು ಕೂಡ ಪರಿಶೀಲಿಸಿದ್ದೇನೆ. ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಜಿಲ್ಲಾ ಶಸ್ತಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.