ಶಸ್ತ್ರಚಿಕಿತ್ಸೆ ನಂತರ ತಿರಂಗಾ ಹಾರಿಸಿದ ಶತಾಯುಷಿ!

bkt-15-2
ಬಾಗಲಕೋಟೆ ನಗರದ ವಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸಿದ್ದ ಶತಾಯುಷಿ ಕಾಶಮ್ಮ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಎಲುಬು ಕೀಲು ತಜ್ಞ ಡಾ.ಗಿರೀಶ ವಾಸನದ, ಡಾ.ರವೀಂದ್ರ ಕುಲಕರ್ಣಿ ಇದ್ದರು.
Published on

ಬಾಗಲಕೋಟೆ: ಶಸ್ತ್ರಚಿಕಿತ್ಸೆಗೆ ಬಂದಿದ್ದ ಶತಾಯುಷಿ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಅಪರೂಪದ ಸನ್ನಿವೇಶ ನಗರದ ವಾಸನದ ಆಸ್ಪತ್ರೆಯಲ್ಲಿ ಮಂಗಳವಾರ ನಡೆಯಿತು.

ಕಾಶಮ್ಮ ಹಿರೇಮಠ (೧೦೩ ವರ್ಷ) ಧ್ವಜಾರೋಹಣ ನೆರವೇರಿಸಿದವರು. ಬಾಗಲಕೋಟೆ ತಾಲೂಕಿನ ತಳಗಿಹಾಳ ಗ್ರಾಮದ ಇವರು ಕೆಲವು ದಿನಗಳ ಹಿಂದೆ ಆಯತಪ್ಪಿ ಬಿದ್ದಿದ್ದರು. ಎಡ ಭಾಗದ ಚಪ್ಪೆ ಮುರಿದಿತ್ತು. ಆಸ್ಪತ್ರೆಗೆ ಬಂದಾಗ ಅಜ್ಜಿಯ ಹೆಮೊಗ್ಲೋಬಿನ್ ಕಡಿಮೆ ಇದ್ದದ್ದರಿಂದ ಎರಡು ಪಾಯಿಂಟ್ ರಕ್ತ ನೀಡಿಲಾಯಿತು. ನಂತರ ಆ.೧೦ರಂದು ಆಸ್ಪತ್ರೆಯ ಎಲುಬು ಕೀಲು ತಜ್ಞ ಡಾ.ಗಿರೀಶ ವಾಸನದ ಶಸ್ತ್ರಚಿಕಿತ್ಸೆ ನಡೆಸಿದರು. ಸದ್ಯ ಅಜ್ಜಿ ಚೇತರಿಸಿಕೊಂಡಿದ್ದು ವಾಕರ್ ಸಹಾಯದಿಂದ ಆಸ್ಪತ್ರೆಯಲ್ಲಿ ನಡೆದಾಡುತ್ತಿದ್ದಾರೆ.


ನೂರಾಮೂರು ವರ್ಷದಲ್ಲೂ ಅಜ್ಜಿ ಆತ್ಮವಿಶ್ವಾಸದಿಂದ ಶಸ್ತ್ರಚಿಕಿತ್ಸೆಗೆ ಸಹಕರಿಸಿದರು. ಅಷ್ಟು ವಯಸ್ಸಿನಲ್ಲೂ ಸ್ವಾವಲಂಬಿಯಾಗಿ ನಡೆದಾಡಬೇಕು ಎಂಬ ಛಲವಿರುವ ಶತಾಯುಷಿಯನ್ನು ಕಂಡು ಹೆಮ್ಮೆ ಎನಿಸಿತು. ಆದ್ದರಿಂದ ಅವರಿಂದಲೇ ನಮ್ಮ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಮ್ಮ ಆಸ್ಪತ್ರೆಗೆ ರೋಗಿಯಾಗಿ ಬಂದು ಶಸ್ತ್ರಚಿಕಿತ್ಸೆ ಪಡೆದ ನಂತರ ಅಜ್ಜಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಮರಳುತ್ತಿದ್ದಾರೆ. ಈ ಬಾರಿ ನಮ್ಮ ಆಸ್ಪತ್ರೆಯ ಸ್ವಾತಂತ್ರ‍್ಯೋತ್ಸವಕ್ಕೆ ಹೊಸ ಮೆರಗು ತಂದಿದ್ದಾರೆ ಎಂದು ಡಾ.ವಾಸನದ ತಿಳಿಸಿದ್ದಾರೆ.

ಎಲುಬು ಕೀಲು ತಜ್ಞ ಡಾ.ಹರ್ಷಾ ಕ್ಯಾಲಕೊಂಡ, ಅರಿವಳಿಕೆ ತಜ್ಞೆ ಡಾ.ಶಿಲ್ಪಾ ಮಾಸೂರ, ಹೃದಯರೋಗ ತಜ್ಞ ಡಾ.ಎಂ.ಜಿ.ಹೆರಕಲ್, ಡಾ.ರವೀಂದ್ರ ಕುಲಕರ್ಣಿ, ಶುಶ್ರೂಷಕರಾದ ಮೋಹನ್ ಜೋಶಿ, ಪರಶುರಾಮ ದೊಡಮನಿ, ರೇಣುಕಾ ಕರಬಾನಿ, ಸತೀಶ ಸಿಂಗದ ಹಾಗೂ ಇತರರು ಶಸ್ತ್ರಚಿಕಿತ್ಸೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net