

ಮೈಸೂರು: ಶವವನ್ನು ಏಕೆ ಮೈಸೂರಿಗೆ ತಂದಿದ್ದಿರಿ? ಎಂದು ಸರಗೂರು ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ನಗು ವನ್ಯಜೀವಿ ವಲಯ ಅರಣ್ಯದಂಚಿನ ಬೆಣ್ಣೆಗೆರೆ ಗ್ರಾಮದಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ ಅವರ ಪುತ್ರ ಶಿವಾನಂದ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದ ಎದುರು ಆಕ್ರೋಶ ವ್ಯಕ್ತಪಡಿಸಿದ ಅವರು, ನಮ್ಮಪ್ಪನ ಶವ ನೋಡೋಕೆ ನೀವು ಬರಬೇಕು. ಅದರ ಬದಲಿಗೆ ನೀವೇ ಶವವನ್ನು ಇಲ್ಲಿಗೆ ತಂದಿರುವುದು ಎಷ್ಟು ಸರಿ? ನಮಗೆ ನ್ಯಾಯ ಬೇಕೇ ಬೇಕು. ನ್ಯಾಯ ಸಿಗುವವರಿಗೂ ನಾವು ಶವ ಇಲ್ಲಿಂದ ತೆಗೆದುಕೊಂಡು ಹೋಗಲ್ಲ. ತಪ್ಪಿತಸ್ಥ ಅಧಿಕಾರಿಗಳ ತಲೆದಂಡ ಆಗಲೇ ಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ಸರಗೂರಿನಲ್ಲಿ ಶವ ಇರಿಸಲು ವ್ಯವಸ್ಥೆ ಇಲ್ಲ. ಆ ಕಾರಣಕ್ಕೆ ಮೈಸೂರಿಗೆ ಶವ ತಂದಿದ್ದಾರೆ. ಮಂತ್ರಿಗಳು ನೋಡಲಿ ಎಂಬ ಕಾರಣ ಅಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ರಾಜಶೇಖರ್ ಮೃತದೇಹದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಸ್ಥಳದಲ್ಲಿದ್ದ ಪ್ರತಿಭಟನಾನಿರತ ರೈತಸಂಘದ ಸದಸ್ಯರ ಅಹವಾಲು ಆಲಿಸಿ, ಮಾನವ, ಪ್ರಾಣಿ ಸಂಘರ್ಷ ತಡೆಗಟ್ಟುವ ಬಗ್ಗೆ ಅಧಿಕಾರಿಗಳು ಹಾಗೂ ರೈತರ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ಕರೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹುಲಿ ದಾಳಿಗೆ ಮೃತಪಟ್ಟ ರೈತನ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಲಾಗುವುದು. ಇಂತಹ ಘಟನೆ ಮರುಕಳಿಸದ ರೀತಿ ಕ್ರಮಕ್ಕೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇಂತಹ ಘಟನೆಗಳಿಗೆ ಕಾಡು ಪ್ರದೇಶ ಕ್ಷೀಣಿಸುತ್ತಿರುವುದು ಒಂದು ಕಾರಣ. ಹುಲಿಗಳ ಸಂಖ್ಯೆ ಹೆಚ್ಚಳ ಮತ್ತೊಂದು ಕಾರಣ. ಗುಂಪು ಸೇರಿದಾಗ ಜನರು ಕೂಗಾಟ ನಡೆಸುತ್ತಾರೆ. ಇದರಿಂದ ಭಯಗೊಂಡ ಕಾಡು ಪ್ರಾಣಿಗಳು ದಾಳಿ ಮಾಡುತ್ತವೆ. ಇದಕ್ಕೆಲ್ಲ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಎಚ್.ಡಿ.ಕೋಟೆ ಭಾಗದಲ್ಲಿ ಅಕ್ರಮ ರೆಸಾರ್ಟ್‌ಗಳು ಹೆಚ್ಚಾಗಿವೆ. ಈ ಕುರಿತು ಸಾಕಷ್ಟು ದೂರುಗಳು ಬಂದಿವೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.