

ಚಾಮರಾಜನಗರ: ಸ್ಮಶಾನ ಜಾಗ ಇರದ ಹಿನ್ನೆಲೆಯಲ್ಲಿ ಶವ ಹೂಳುವ ವಿಚಾರದಲ್ಲಿ ಸೋಮವಾರ ಗೊಂದಲ ಉಂಟಾಗಿದ್ದು, ನಗರಸಭೆ ಸದಸ್ಯರೊಬ್ಬರ ಮಧ್ಯೆ ಪ್ರವೇಶದಿಂದ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಂತಾಗಿದೆ.
ನಗರದ 9ನೇ ವಾರ್ಡ್ ನಿವಾಸಿ ಬೋವಿ ಸಮುದಾಯದ ಭಾಗ್ಯಮ್ಮ(66) ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದರು. ವಾರ್ಡ್ ಸಮೀಪದಲ್ಲೇ ಇರುವ ಸ್ಮಶಾನದ ಜಾಗದಲ್ಲಿ ಹಿಂದಿನಿಂದ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದರು. ಬೋವಿ ಸಮುದಾಯದವರಲ್ಲದೇ, ಪೌರಕಾರ್ಮಿಕರು ಮತ್ತು ಇನ್ನಿತರೆ ಸಣ್ಣ-ಪುಟ್ಟ ಸಮುದಾಯದವರು ಕೂಡ ಈ ಸ್ಮಶಾನದಲ್ಲೇ ಶವಗಳನ್ನು ಹೂಳುತ್ತಿದ್ದರು. ಆದರೇ ಇತ್ತೀಚೆಗೆ ಈ ಸ್ಮಶಾನಕ್ಕೆ ದೇವಾಂಗ ಸಮಾಜದ ರುದ್ರಭೂಮಿ ಎಂದು ಬ್ಯಾನರ್ ಅಳವಡಿಸಿ, ಗೇಟ್ ನಿರ್ಮಾಣ ಮಾಡಲಾಗಿತ್ತು. ಈ ವೇಳೆ ಮೃತ ಭಾಗ್ಯಮ್ಮ ಕುಟುಂಬದವರು ಶವವನ್ನು ಹೂಳುವುದು ಎಲ್ಲಿ ಎಂದು ಚಿಂತೆಗೀಡಾಗಿದ್ದರು.
ನಗರಸಭಾ ಸದಸ್ಯರಾದ ಎಂ.ಮಹೇಶ್ ಅವರು ದೇವಾಂಗ ಸಮುದಾಯದ ಯಜಮಾನರು ಮತ್ತು ಇನ್ನಿತರೆ ಅಧಿಕಾರಿಗಳನ್ನು ಸಂಪರ್ಕಿಸಿ ಶವ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಅವಕಾಶ ಮಾಡಿಕೊಂಡುವಂತೆ ಮನವಿ ಮಾಡಿದರು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣವೂ ನಿರ್ಮಾಣವಾಗಿತ್ತು. ಶವವನ್ನು ಸುಡುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ ಹೊರತು, ಹೂಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ದೇವಾಂಗ ಸಮುದಾಯದವರು ಪಟ್ಟು ಹಿಡಿದಿದ್ದರು. ಕೆಲಕಾಲ ಮನವೂಲಿಕೆಯ ಬಳಿಕ ಶವ ಹೂಳಲು ಅವಕಾಶ ಮಾಡಿಕೊಟ್ಟರು.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಇದೊಂದು ಬಾರಿ ಶವ ಹೂಳಲು ಅವಕಾಶ ಮಾಡಿಕೊಡಿ, ಮುಂದಿನ ದಿನಗಳಲ್ಲಿ ಬೋವಿ ಸಮುದಾಯದವರಿಗೆ ಪ್ರತ್ಯೇಕವಾಗಿ ಸ್ಮಶಾನಕ್ಕೆ ಜಾಗ ಕೊಡುತ್ತೇವೆ ಎಂದು ತಿಳಿಸಿದರು. 9 ನೇವಾರ್ಡ್‌ನಲ್ಲಿ ವಾಸಿಸುವ ಬೋವಿ ಸಮುದಾಯ, ಪೌರಕಾರ್ಮಿಕರು ಹಾಗೂ ಇನ್ನಿತರರಿಗೆ ಸ್ಮಶಾನ ಸೌಲಭ್ಯವಿಲ್ಲದೇ ಸಮಸ್ಯೆ ಅನುಭವಿಸುತ್ತಿದ್ದು, ಶೀಘ್ರದಲ್ಲೇ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಸುವ ಸಂಬಂಧ ಕ್ರಮವಹಿಸಲಾಗುವುದು ಎಂದು ನಗರಸಭಾ ಸದಸ್ಯ ಮಹೇಶ್ ಅವರು ವಿಜಯವಾಣಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆ 9ನೇ ವಾರ್ಡ್‌ನ ಪೌರಕಾರ್ಮಿಕರು, ಬೋವಿ ಸಮುದಾಯದವರು ಮತ್ತು ಇನ್ನಿತರೆ ಸಮುದಾಯದವರು ದೇವಾಂಗ ಸಮುದಾಯಕ್ಕೆ ಸೇರಿದ ಸ್ಮಶಾನದಲ್ಲೇ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ಆದರೇ ದೇವಾಂಗ ಸಮುದಾಯದವರು ಸ್ಮಶಾನಕ್ಕೆ ಗೇಟ್ ಅಳವಡಿಸಿದ್ದು, ಇವರಿಗೆ ತೊಂದರೆಯಾಗಿದೆ. ನನ್ನ ವಾರ್ಡ್‌ನ ನಿವಾಸಿಗಳಿಗೆ ಶೀಘ್ರದಲ್ಲೇ ಸ್ಮಶಾನಕ್ಕೆ ಜಾಗಕೊಡಿಸಲು ಕ್ರಮವಹಿಸಲಾಗುವುದು.
ಎಂ.ಮಹೇಶ್, ನಗರಸಭಾ ಸದಸ್ಯ, ಚಾಮರಾಜನಗರ