ಶಿವ ದೇಗುಲಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ

SRP_09-01(1)jpj
Published on

ಶ್ರೀರಂಗಪಟ್ಟಣ: ಮಹಾಶಿವರಾತ್ರಿ ಪ್ರಯುಕ್ತ ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಆಚರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ(ಪರ) ಅದ್ದೂರಿಯಾಗಿ ನೆರವೇರಿತು.


ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಗೌತಮ ಋಷಿ ಸ್ಥಾಪಿತ ಚತುರ್ಯುಗಮೂರ್ತಿ ಶ್ರೀಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ರಾತ್ರಿಪೂರ ಶಿವನಾಮಸ್ಮರಣೆಯ ಜಾಗರಣೆಯೊಂದಿಗೆ ಪೂಜೆಗಳು ನಡೆದವು.


ಶ್ರೀಗಂಗಾಧರೇಶ್ವರಸ್ವಾಮಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಭಸ್ಮಾಭಿಷೇಕದೊಂದಿಗೆ ಚಿನ್ನದ ಮುಖವಾಡವನ್ನು ತೊಡಿಸಿ ಬಿಲ್ವಪತ್ರೆ ಸೇವೆಗಳನ್ನು ಅರ್ಪಿಸಿ ಮಹಾಮಂಗಳಾರತಿಯೊಂದಿಗೆ ಶಿವನ ಆರಾಧನೆ ನಡೆಸಲಾಯಿತು.


ಶನಿವಾರ ಪಾರ್ವತಿ ದೇವಿಯೊಂದಿಗೆ ಶ್ರೀಗಂಗಾಧರೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಕಾಷ್ಠ ರಥದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಚತುಷ್ಪಥ ರಾಜಬೀದಿಗಳಲ್ಲಿ ಭಕ್ತರೊಂದಿಗೆ ರಥೋತ್ಸವ ನೆರವೇರಿಸಲಾಯಿತು.


ಇನ್ನು ಪಟ್ಟಣದ ಜಿ.ಬಿ.ಹೊಳೆಯ ಕಾಶಿ ಚಂದ್ರಮೌಳೇಶ್ವರಸ್ವಾಮಿ, ಹೊರ ವಲಯದ ಚಂದ್ರವನ ಆಶ್ರಮದ ಶ್ರೀಚಂದ್ರಮೌಳೇಶ್ವರಸ್ವಾಮಿ, ಬಾಬುರಾಯನಕೊಪ್ಪಲು ಗ್ರಾಮದ ಕಾಶಿ ವಿಶ್ವನಾಥೇಶ್ವರಸ್ವಾಮಿ, ಕಿರಂಗೂರು ಗ್ರಾಮದ ಶ್ರೀಬ್ರಹ್ಮೇಶ್ವರಸ್ವಾಮಿ ದೇವಾಲಯ, ಕೂಡಲಕುಪ್ಪೆ ಗ್ರಾಮದ ಶ್ರೀಶನೈಶ್ಚರಸ್ವಾಮಿ ದೇವಾಲಯ, ಶ್ರೀಚಂದ್ರಮೌಳೇಶ್ವರ ದೇವಾಲಯ, ಪಾಲಹಳ್ಳಿಯ ಪವಾಡ ಪುರುಷ ಶಂಭುಲಿಂಗೇಶ್ವರಸ್ವಾಮಿ, ಮರಳಗಾಲ ಗ್ರಾಮದ ಶ್ರೀಮರಡಿ ಲಿಂಗೇಶ್ವರಸ್ವಾಮಿ, ಮಂಡ್ಯದಕೊಪ್ಪಲು ಗ್ರಾಮದ ಶ್ರೀಬೋರೇದೇವರಸ್ವಾಮಿ, ಚಂದಗಾಲು ಗ್ರಾಮದ ಶ್ರೀಮಹದೇಶ್ವರ ಸ್ವಾಮಿ, ಮಹದೇವಪುರ ಗ್ರಾಮದ ಶ್ರೀಕಾಶಿ ವಿಶ್ವನಾಥಸ್ವಾಮಿ, ಬೆಳಗೊಳದ ಬಲಮುರಿಯ ಶ್ರೀಅಗಸ್ತೇಶ್ವರಸ್ವಾಮಿ ದೇವಾಲಯಗಳಲ್ಲಿ ಶಿವನ ಆರಾಧನೆಯೊಂದಿಗೆ ಭಕ್ತರು ದೇವರ ದರ್ಶನ ಹಾಗೂ ಪ್ರಸಾದ ಸ್ವೀಕರಿಸಿದರು.


ತಾಲೂಕಿನ ಗೌಡಹಳ್ಳಿ-ಗಣಂಗೂರು ಗ್ರಾಮಗಳಲ್ಲಿ 12 ವರ್ಷಗಳ ನಿಷೇಧಾಜ್ಞೆ ತೆರವು ಹಿನ್ನೆಲೆ ದ್ವೇಷ-ವೈರತ್ವಗಳ ಶಮನದ ಬಳಿಕ ಶಿವರಾತ್ರಿ ದಿನದಂದು ಶ್ರೀಬಸವೇಶ್ವರಸ್ವಾಮಿ ದೇವರಿಗೆ ಎರಡು ಗ್ರಾಮಗಳ ಗ್ರಾಮಸ್ಥರು ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net