

ಹರಪನಹಳ್ಳಿ: ತಾಲೂಕಿನ ಕಣಿವಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳಿಗೆ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಸುಣ್ಣಬಣ್ಣ ಬಳಿಯುವ ಕಾರ್ಯಕ್ಕೆ ಮಂಗಳವಾರದಿಂದ ಮುಂದಾಗಿದ್ದಾರೆ.
ಕಣಿವಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2021-22ರಲ್ಲಿ 7 ಕೊಠಡಿ, ಶೌಚಗೃಹ ಕಟ್ಟಡ ನಿರ್ಮಾಣಕ್ಕೆ 81 ಲಕ್ಷ ರೂ.ಮಂಜೂರಾಗಿತ್ತು. ಕೊಠಡಿ ನಿರ್ಮಾಣ ಜವಾಬ್ದಾರಿಯನ್ನು ಕರ್ನಾಟಕ ರೂರಲ್ ಇನ್ಪಾಸ್ಟ್ರಕ್ಚರ್ ಡೆವೆಲೆಪ್ಮೆಂಟ್ ಲಿ. (ಕೆಆರ್‌ಐಡಿಎಲ್ ) ವಹಿಸಲಾಗಿತ್ತು. ಹಣ ಮಂಜೂರಾಗಿ ಮೂರು ವರ್ಷವಾದರೂ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿರಲಿಲ್ಲ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೂ ಯಾವುದೇ ಪ್ರಗತಿ ಕಾಣಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಸ್ವತಃ ದೇಣಿಗೆ ಸಂಗ್ರಹಿಸಿ ಅಂದಾಜು ಒಂದು ಲಕ್ಷ ರೂ. ವೆಚ್ಚದಲ್ಲಿ ನಲಿಕಲಿ ಬೋಧಿಸುವ ಮೂರು ಕೊಠಡಿಗಳಿಗೆ ಸುಣ್ಣಬಣ್ಣ ಬಳಿಯುವ ಕೆಲಸ ಆರಂಭಿಸಿದ್ದಾರೆ.
ಶಾಲೆಯಲ್ಲಿ ಆರಂಭಿಸಿರುವ ಪೂರ್ವ ಪ್ರಾಥಮಿಕ ಎಲ್ಕೆಜಿ ಮತ್ತು ಯುಕೆಜಿ ಹಾಗೂ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿರುವ ಕಾರ್ಯಕ್ಕೆ ಶಾಲೆಯ ಶಿಕ್ಷಕ ಎಸ್.ರಮೇಶ್ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.