

ಚಿಕ್ಕಮಗಳೂರು: ಭಾರತ ಸೇವಾದಳದ ಸಾಮಾಜಿಕ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪ್ರತಿಯೊಬ್ಬರೂ ಸಹಕರಿಸಬೇಕು. ಇದಕ್ಕೆ ಪೂರಕವಾಗಿ ಎಲ್ಲ ಶಾಲಾ ಕಾಲೇಜುಗಳಲ್ಲೂ ಘಟಕಗಳನ್ನು ಸ್ಥಾಪಿಸಬೇಕು ಎಂದು ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯೆ ಉಮಾ ಐ.ಬಿ.ಶಂಕರ್ ತಿಳಿಸಿದರು.
ತೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದ ತಾಲೂಕು ಸಮಿತಿ ಶನಿವಾರ ಏರ್ಪಡಿಸಿದ್ದ ಸೇವಾದಳ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ತರ ಪಾತ್ರವಹಿಸಿತ್ತು, ಸ್ವಾತಂತ್ರ್ಯ ಹೋರಾಟಕ್ಕೆ ಲಕ್ಷಾಂತರ ದೇಶಭಕ್ತರನ್ನು ಕೊಡುಗೆಯಾಗಿ ನೀಡಿದ್ದ ಸೇವಾದಳಕ್ಕೆ ಕಾಯಕಲ್ಪ ನೀಡುವ ಕೆಲಸ ಆಗಬೇಕು. ಯುವ ಪೀಳಿಗೆಯಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ ಮತ್ತು ಶಿಸ್ತನ್ನು ಬೆಳೆಸಲು ಇದು ಸಹಕಾರಿ ಎಂದು ಹೇಳಿದರು.
ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ ಮತ್ತು ಭಾವೈಕ್ಯ ಬೆಳೆಸುವಲ್ಲಿ ಸೇವಾದಳ ಸಹಕಾರಿಯಾಗಿದೆ ಎಂದರು.
ತಾಲೂಕು ಅಧ್ಯಕ್ಷ ಜಿ.ಶಂಕರ್, ತಾಲೂಕು ಸಂಘಟಕ ಸದಸ್ಯ ಎಸ್.ಇ.ಲೋಕೇಶ್ವರಾಚಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಟಿ.ಎಂ.ತಾರಾಮಣಿ, ತಾಲೂಕು ಕಾರ್ಯದರ್ಶಿ ಮಹೇಶಪ್ಪ, ಉಪಾಧ್ಯಕ್ಷ ಕಾಳಯ್ಯ, ಜಿಲ್ಲಾ ಸಂಘಟಕ ಚಂದ್ರಕಾಂತ, ಮುಖ್ಯಶಿಕ್ಷಕ ದಿನೇಶ್, ಶಿಕ್ಷಕರಾದ ಕೆ.ಎನ್.ರೇಖಾ, ವಿ.ಟಿ.ಪ್ರೇಮಾ ಇದ್ದರು.