ಶರಾವತಿ ಹಿನ್ನೀರಿನ ಆಳ ಅರಿಯುವಲ್ಲಿ ವಿಫಲವಾಗಿದ್ದೆ ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬಕ್ಕೆ ಕಾರಣ: ಶಾಸಕ ಹರತಾಳು ಹಾಲಪ್ಪ

HOS WEB !!
Published on

ಹೊಸನಗರ: ಸೇತುವೆ ನಿರ್ಮಾಣ ವಿಚಾರದಲ್ಲಿ ಶರಾವತಿ ಹಿನ್ನೀರಿನ ಆಳ ಅರಿಯುವಲ್ಲಿ ವಿಫಲವಾಗಿರುವುದೇ ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಹಸಿರುಮಕ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಮೇಲೆಯೇ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೇತುವೆ ಕಾಮಗಾರಿ ಎಸ್ಟಿಮೇಟ್‌ನಲ್ಲಿ ಅಂದಾಜು 24ರಿಂದ 25 ಅಡಿ ಆಳ ಗುರುತಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಂದಷ್ಟು ಕಾಮಗಾರಿ ಕೂಡ ಆಗಿದೆ. ಆದರೆ ಈಗ 70ರಿಂದ 75 ಅಡಿ ಇದೆ. ಕಾಮಗಾರಿ ಸಾಧ್ಯವಿಲ್ಲ ಎಂಬುದು ಕಾಮಗಾರಿ ಗುತ್ತಿಗೆ ಕಂಪನಿಗೆ ತಿಳಿದಿದೆ. ಸರಿಯಾದ ಗುತ್ತಿಗೆ ಕಂಪನಿಯನ್ನು ಗುರುತಿಸದಿರುವುದು ಕಾಮಗಾರಿ ಹಿನ್ನಡೆಗೆ ಕಾರಣವಾಗಿದೆ ಎಂದರು.

ಕಾಮಗಾರಿ ಕಷ್ಟ ಸಾಧ್ಯ ಎಂದು ಅರಿತ ಗುತ್ತಿಗೆ ಕಂಪನಿ ಹೊಸ ಪ್ರಪೋಸಲ್‌ನೀಡಿದೆ. ಮುಖ್ಯಮಂತ್ರಿ ಗಮನಕ್ಕೂ ತರಲಾಗಿದ್ದು ಡಿಟೇಲ್ಸ್ ಸಮೇತ ಬರುವಂತೆ ಅವರು ತಿಳಿಸಿದ್ದಾರೆ. ಗುತ್ತಿಗೆ ಕಂಪನಿ ನೀಡಿದ ಪ್ರಪೋಸಲ್ ಇಟ್ಟು ಚರ್ಚಿಸಿ ಮುಂದೆ ಆಗಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದರೂ ಒಂದೂವರೆ ವರ್ಷ ಕಾಮಗಾರಿ ನಿರ್ವಹಿಸಲು ಬೇಕಾಗುತ್ತದೆ. ಯಾವುದೇ ಕಾಮಗಾರಿ ನನ್ನಿಂದ ವಿಳಂಬ ಆದ ಉದಾಹರಣೆಗಳಿಲ್ಲ. ಇಲ್ಲಾಗಿರುವ ಟೆಕ್ನಿಕಲ್ ಸಮಸ್ಯೆಗೆ ನಾನು ಹೊಣೆಯಲ್ಲ ಎಂದರು.

ಹಸಿರುಮಕ್ಕಿ ಸೇತುವೆ ಬಗ್ಗೆ ಎಷ್ಟೇ ಟೀಕೆ, ಹೋರಾಟ, ಎಷ್ಟೇ ಹೇಳಿಕೆ ನೀಡಿದರೂ ಪ್ರಯೋಜನವಿಲ್ಲ. 60 ಅಡಿಗಿಂತ ಹೆಚ್ಚು ಆಳದಲ್ಲಿ ಕೆಲಸ ಮಾಡುವ ಕೆಲಸ ಮಾಡುವ ಟೆಕ್ನಾಲಜಿ ತರಬೇಕಿದೆ. ಅದು ಬಿಟ್ಟು ಹಣಕಾಸಿನ ತೊಂದರೆಯಿಂದ ಕೆಲಸ ನಿಂತಿದ್ದಲ್ಲ. 2018ರಲ್ಲಿ ಕಾಮಗಾರಿ ಆರಂಭವಾಗಿದ್ದು 2022ರ ಮಾರ್ಚ್ ವೇಳೆಗೆ ಮುಗಿಯಬೇಕಿತ್ತು. ಪಟಗುಪ್ಪ, ಹೊಳೆಬಾಗಿಲು ಮತ್ತು ಹಸಿರುಮಕ್ಕಿ ಸೇತುವೆ ಸಂಬಂಧ ಗುತ್ತಿಗೆದಾರರನ್ನು ಕಂಡಿಲ್ಲ. ಆದರೆ ಪುಡಿಗಾಸಿಗೆ ಆಸೆ ಪಡುವ ರಾಜಕಾರಣಿಗಳು ಕಾಮಗಾರಿಯಲ್ಲಿ ನಮಗೇನು ಸಿಕ್ಕಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net