

ರಿಪ್ಪನ್‌ಪೇಟೆ: ಕಳೆದ ಮೂರು ಚುನಾವಣೆಯಲ್ಲಿ ಶರಾವತಿ ಮುಳಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸುತ್ತೇನೆಂದು ನಂಬಿಸಿ ಶಾಸಕರಾದ ಹರತಾಳು ಹಾಲಪ್ಪ ಅಧಿಕಾರದ ದಿನಗಳಲ್ಲಿ ಸಂತ್ರಸ್ತರ ಪರವಾಗಿ ಏನು ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಅರಸಾಳು ಗ್ರಾಪಂ ಮಾಜಿ ಅಧ್ಯಕ್ಷ ಉಮಾಕರ ಪ್ರಶ್ನಿಸಿದರು.
ಪ್ರತಿ ಚುನಾವಣೆಯಲ್ಲಿ ಅವರು ನಾವು ಮುಳುಗಡೆ ಕುಟುಂಬದಿಂದ ಬಂದವನು, ಗದ್ದೆ ಬಿತ್ತಿದ್ದೇನೆ, ಕೊಯಿಲು ಮಾಡಿದ್ದೇನೆ, ಎಂದು ಹೇಳಿಕೊಂಡು ಓಟು ಪಡೆದ ನಂತರ ಏನು ಮಾಡಿದ್ದಾರೆ? ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೇಳಿದರು.
ಕಾಗೋಡು ತಿಮ್ಮಪ್ಪ ಮಂತ್ರಿಯಾದ ಸಂದರ್ಭದಲ್ಲಿ ಮದನ್ ಗೋಪಾಲ್ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ, ಹಕ್ಕುಪತ್ರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಪ್ರತಿ ಚುನಾವಣೆಯಲ್ಲಿ ಮುಳಗಡೆ ಸಂತ್ರಸ್ತರ ನೆನಪು ಮಾಡುವ ನೀವು, ಗೆದ್ದ ಮೇಲೆ ರಾಜಕೀಯ ಮಾಡುತ್ತಿದ್ದೀರಿ. ನಿಮಗೆ ರೈತರ ಮೇಲೆ ನಿಜವಾದ ಕಾಳಜಿ ಇದ್ದಲ್ಲಿ ಇನ್ನು ಎರಡು ತಿಂಗಳೊಳಗೆ ಹಕ್ಕುಪತ್ರ ಕೊಡಿಸಿ, ಇಲ್ಲವಾದರೆ ಅಸಮರ್ಥರೆಂದು ಒಪ್ಪಿಕೊಳ್ಳಿ ಎಂದು ಆಗ್ರಹಿಸಿದರು.