ಶರನ್ನವರಾತ್ರಿಗೆ ನವದುರ್ಗೆಯರ ತವರಲ್ಲಿ ಭರದ ಸಿದ್ಧತೆ

Ekanatheshwari Devi
Published on

ಚಿತ್ರದುರ್ಗ: ಶಕ್ತಿದೇವತೆಗಳ ಆರಾಧನೆಯ ತವರೆಂದೇ ಖ್ಯಾತಿ ಪಡೆದಿರುವ ಕೋಟೆನಾಡಿನಲ್ಲಿ ಶರನ್ನವರಾತ್ರಿಯನ್ನು ಈ ಬಾರಿಯೂ ಅತ್ಯಂತ ವಿಶೇಷವಾಗಿ ಆಚರಿಸಲು ದೇವಿ ದೇಗುಲಗಳಲ್ಲಿ ಸಕಲ ಸಿದ್ಧತೆ ಭರದಿಂದ ಸಾಗಿತು.

ಅ. 3ರಿಂದ ಆರಂಭವಾಗುವ ಮಹೋತ್ಸವಕ್ಕೆ ಮೂರ್ನಾಲ್ಕು ದಿನಗಳಿಂದಲೂ ಸಿದ್ಧತೆ ನಡೆಯುತ್ತಿದ್ದು, ಸ್ವಚ್ಛತೆ, ವಿದ್ಯುದ್ದೀಪಾಲಂಕಾರ, ಸುಣ್ಣ-ಬಣ್ಣ, ಸ್ವಾಗತ ಕಮಾನುಗಳೊಂದಿಗೆ ಜಿಲ್ಲೆಯ ಹಲವೆಡೆ ಇರುವ ನೂರಾರು ಶಕ್ತಿದೇವತೆಗಳ ದೇಗುಲಗಳು ಸಜ್ಜಾಗಿವೆ.

ಅಸಂಖ್ಯಾತ ಭಕ್ತಗಣ ಶ್ರದ್ಧಾಭಕ್ತಿಯಿಂದ ಆಚರಿಸಲು ಉತ್ಸುಕರಾಗಿದ್ದಾರೆ. ಮನೆಗಳಲ್ಲೂ ಶುದ್ಧೀ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ನಿತ್ಯವೂ ನವರಾತ್ರಿಯ ನವೋಲ್ಲಾಸಕ್ಕೆ ಉತ್ಸವ ಸಾಕ್ಷಿಯಾಗಲಿದೆ.

ದಸರಾ ಮಹೋತ್ಸವದ ವೇಳೆ ಒಂಬತ್ತು ರಾತ್ರಿ, ಹತ್ತು ಹಗಲು ಶಕ್ತಿದೇವತೆಗಳನ್ನು ಪೂಜಿಸುವುದು ವೈಶಿಷ್ಟೃ. ಹೀಗಾಗಿ ನವ ಧಾನ್ಯ, ಪುಷ್ಪ, ತರಕಾರಿ, ಆಹಾರ ಪದಾರ್ಥ, ರೇಷ್ಮೆ ಸೀರೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ದೇವಿಯರ ಮೂರ್ತಿಗೆ ನಿತ್ಯ ವೈಭವೋಪೇತ ಅಲಂಕಾರ ಸೇವೆ ಜರುಗಲಿದೆ.

ಕೋಟೆನಗರಿಯ ನವದುರ್ಗೆಯರು ಸೇರಿ ಎಲ್ಲ ಶಕ್ತಿದೇವತೆಗಳಿಗೂ ನವರಾತ್ರಿ ಅಂಗವಾಗಿ ನಿತ್ಯ ದೇವಿ ಪುರಾಣ, ಕುಂಕುಮಾರ್ಚನೆ, ಅಷ್ಟೋತ್ತರ, ಸಹಸ್ರನಾಮ, ಮಹಾ ಮಂಗಳಾರತಿ ಸೇರಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿದೆ.

ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಣಿವೆ ಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲಗಳಲ್ಲಿ ಮೂಲ ಮತ್ತು ಉತ್ಸವಮೂರ್ತಿಗಳು ನವರಾತ್ರಿಯಲ್ಲಿ ವಿಶೇಷಾಲಂಕಾರದೊಂದಿಗೆ ಕಂಗೊಳಿಸಲಿವೆ. ಅ. 12ರವರೆಗೂ ಭಕ್ತರ ಕಣ್ಮನ ಸೆಳೆಯಲಿವೆ.

ಕಾಳಿಕಮಠೇಶ್ವರಿ, ಮಲೆನಾಡು ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ಅಂಬಾಭವಾನಿ, ದಾನಮ್ಮ, ಗೋಪಾಲಪುರದ ದುರ್ಗಾಪರಮೇಶ್ವರಿ, ಕರುವಿನಕಟ್ಟೆ ವೃತ್ತದ ಅಂತರಘಟ್ಟಮ್ಮ, ಗಾಳಿ ಮಾರಮ್ಮ, ಚಾಮುಂಡೇಶ್ವರಿ, ಅನ್ನಪೂರ್ಣೇಶ್ವರಿ, ಆದಿಶಕ್ತಿ ಮಾತಾ, ಕೋಟೆಯಲ್ಲಿನ ಬನಶಂಕರಮ್ಮ, ಬುರುಜನಹಟ್ಟಿಯ ಬನಶಂಕರಿ, ರೇಣುಕಾಯಲ್ಲಮ್ಮ ದೇವಿ ದೇಗುಲಗಳಲ್ಲೂ ನವರಾತ್ರಿ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

ದಸರಾಗೆ ದೇವಿ ದೇಗುಲಗಳು ಅಷ್ಟೇ ಅಲ್ಲದೆ, ಶಿವ, ಗಣಪತಿ, ವೆಂಕಟೇಶ್ವರ ಸ್ವಾಮಿ ಹೀಗೆ… ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ಜರುಗಲಿವೆ. ಜಿಲ್ಲೆಯ ಕೆಲವೆಡೆ ದೇವಿ ಮೂರ್ತಿ ಪ್ರತಿಷ್ಠಾಪಿಸಲು ಪೆಂಡಾಲ್ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net