

ಚಿಕ್ಕಮಗಳೂರು: ಹಿಂದೂ ಪರ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್ ಅವರಿಗೆ ಒಂದು ತಿಂಗಳ ಕಾಲ ಚಿಕ್ಕಮಗಳೂರು ಪ್ರವೇಶ ನಿರ್ಬಂಧಿಸಿರುವುದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಹಿಂದೂ ಪರ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್‌ಪಿ ಕಚೇರಿ ಎದುರು ಆಗಮಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಹಿಂದೂ ಪರ ಸಂಘಟನೆ ಮುಖಂಡ ಶರಣ್ ಪಂಪ್‌ವೆಲ್ ಅವರು ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರು ನಗರಕ್ಕೆ ಸೋಮವಾರ ಆಗಮಿಸಬೇಕಿತ್ತು. ಆದರೆ, ಜು. ೬ರಂದು ಜಿಲ್ಲೆಗೆ ಅವರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಹೇಳಿದರು.
ಶರಣ್ ಪಂಪ್ವೆಲ್ ಅವರಿಗೆ ಜಿಲ್ಲಾ ಪ್ರವೇಶ ನಿರ್ಬಂಧ ತೆರವುಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ಚಿಕ್ಕಮಗಳೂರು, ಮೂಡಿಗೆರೆ, ಆಲ್ದೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೈಠಕ್‌ನಲ್ಲಿ ಶರಣ್ ಪಂಪ್‌ವೆಲ್ ಪಾಲ್ಗೊಳ್ಳಬೇಕಿತ್ತು ಆದರೆ, ಜಿಲ್ಲಾಡಳಿತ ಜಿಲ್ಲೆಯಲ್ಲಿ ಸೌಹಾರ್ದತೆ ಹದಗೆಡುವ ಹಾಗೂ ಶರಣ್ ಪಂಪ್‌ವೆಲ್ ಅವರ ಮೇಲೆ ೨೨ ಪ್ರಕರಣಗಳು ದಾಖಲಾಗಿದೆ ಎಂಬ ಕಾರಣ ನೀಡಿ ಜಿಲ್ಲೆ ಪ್ರವೇಶಿಸದಂತೆ ಜು. ೬ ದ ಆ. ೪ರವರೆಗೆ ನಿರ್ಬಂಧ ವಿಧಿಸಿರುವುದು ನೋವುಂಟು ಮಾಡಿದೆ ಎಂದು ತಿಳಿಸಿದರು.
ಶರಣ್ ಪಂಪ್‌ವೆಲ್ ಅವರು ಹಿಂದೆಯೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆಗ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೂ ಜಿಲ್ಲಾಡಳಿತ ಏಕೆ ಈ ಕ್ರಮಕ್ಕೆ ಮುಂದಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯುವ ಭರವಸೆ ಜಿಲ್ಲಾಧಿಕಾರಿಗಳು ನೀಡಿದ್ದು, ಅದು ಈಡೇರದಿದ್ದರೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ವಿಶ್ವಹಿಂದೂ ಪರಿಷತ್ ಮುಖಂಡ ಆರ್.ಡಿ.ಮಹೇಂದ್ರ ಮಾತನಾಡಿ, ಶರಣ್ ಪಂಪ್‌ವೆಲ್ ಅವರು ಕಳೆದ ೨೦ ವರ್ಷಗಳಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಸಂಘಟನೆ ವಿಸ್ತರಿಸುವ ದೃಷ್ಟಿಯಿಂದ ಅವರು ಬರುವರಿದ್ದರು. ಈ ಹಿಂದೆ ದತ್ತಜಯಂತಿ ಹೋರಾಟ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಭಾಷಣ ಮಾಡಿರುವ ನಿದರ್ಶನವಿದೆ. ಆದರೆ, ಜಿಲ್ಲೆಯಲ್ಲಿ ಎಲ್ಲಿಯೂ ಅಶಾಂತಿ ಮೂಡಿಸುವ ವಾತಾವರಣ ನಿರ್ಮಾಣವಾಗಿಲ್ಲ. ಜಿಲ್ಲಾಡಳಿತದ ಈ ನಿರ್ಧಾರ ಖಂಡನೀಯ ಎಂದು ತಿಳಿಸಿದರು.
ಜಿಲ್ಲಾಡಳಿತ ಚಿಕ್ಕಮಗಳೂರು ಜಿಲ್ಲೆಯನ್ನು ಮಂಗಳೂರಿಗೆ ಹೋಗಲಿಸುತ್ತಿರುವುದು ನೋವುಂಟು ಮಾಡಿದೆ. ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹಾಗೂ ಜಿಲ್ಲಾ ಎಸ್ಪಿ ಡಾ.ವಿಕ್ರಮ್ ಅಮಟೆ ಅವರನ್ನು ಭೇಟಿ ಮಾಡಿ ನಿರ್ಬಂಧವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದೇವೆ. ನಿರ್ಬಂಧ ಹಿಂಪಡೆಯದಿದ್ದರೇ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ಒಂದು ವಾರದೊಳಗೆ ಶರಣ್ ಪಂಪ್‌ವೆಲ್ ಅವರನ್ನು ಕರೆಸಿ ಅದ್ದೂರಿ ಸ್ವಾಗತ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರಾದ ಶ್ರೀಕಾಂತ ಪೈ, ಪುಷ್ಪರಾಜ್, ಪ್ರದೀಪ್, ರಂಗನಾಥ್ ಮತ್ತಿತರರಿದ್ದರು.