ಶರಣೆ ದಾನಮ್ಮದೇವಿ ತಪೋ ಸ್ಥಾನ ಅಭಿವೃದ್ಧಿಪಡಿಸಿ

Capture1
Published on

ಬಸವಕಲ್ಯಾಣ: ತಾಲೂಕಿನ ನಾರಾಯಣಪುರ ಸಮೀಪದ ಶರಣೆ ದಾನಮ್ಮ ತಪೋ ಸ್ಥಾನವನ್ನು ಬಿಕೆಡಿಬಿಯಿಂದ ಅಭಿವೃದ್ಧಿ ಮಾಡಬೇಕು ಎಂದು ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಶ್ರೀ ಬಸವಪ್ರಭು ಸ್ವಾಮೀಜಿ ಒತ್ತಾಯಿಸಿದರು.

ನಾರಾಯಣಪುರ ಸಮೀಪದ ಶಿವಲಿಂಗಪ್ಪ ತಾಂಬೋಳೆ ಅವರ ಹೊಲದ ಪರಿಸರದಲ್ಲಿರುವ ಶರಣೆ ದಾನಮ್ಮ ತಪೋ ಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ದಾನಮ್ಮದೇವಿ ಜ್ಯೋತಿ ಯಾತ್ರೆ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

2ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸೇರಿದಂತೆ ಶರಣರ ತತ್ವ, ಸಂದೇಶಗಳಿಗೆ ಮಾರು ಹೋದ ಶರಣೆ ದಾನಮ್ಮ ಕಲ್ಯಾಣಕ್ಕೆ ಬಂದರು. ಬಸವಕಲ್ಯಾಣದಿಂದ ಪೂರ್ವಕ್ಕೆ ಎರಡು ಕಿ.ಮೀ ಸಮೀಪವಿರುವ ನಾರಾಯಣಪುರದಲ್ಲಿ ಉಳಿದು ಶರಣರಿಗೆ ದಾಸೋಹ ಕಾರ್ಯ ನಡೆಸುತ್ತಿದ್ದರು. ಗುಣತೀರ್ಥವಾಡಿಯ ಅರಣ್ಯದಲ್ಲಿ ಜಂಬಿಟ್ಟಿಗೆಯಿಂದ ಆವೃತವಾದ ಬೃಹತ್ ಗವಿಯಲ್ಲಿ ಲಿಂಗಾನುಷ್ಠಾನಗೈದಿದ್ದಾರೆ. ಈ ಸ್ಥಳದ ಅಭಿವೃದ್ಧಿ ಅಗತ್ಯವಾಗಿದೆ ಎಂದರು.

ಶರಣೆ ದಾನಮ್ಮ ಅನೇಕ ಪವಾಡಗಳನ್ನು ಮಾಡಿ ಭಕ್ತರನ್ನು ಉದ್ಧರಿಸಿದ್ದಾರೆ. ನಂಬಿಕೆ ಇಟ್ಟು ಪೂಜಿಸುವವರ ಇಚ್ಛೆಯನ್ನು ಪೂರೈಸುವ ಶಕ್ತಿದಾತೆಯಾಗಿದ್ದಾರೆ. ಪ್ರತಿ ವರ್ಷ ಜ್ಯೋತಿಯಾತ್ರೆ ಹಮ್ಮಿಕೊಂಡು ಗಣಮೇಳ ಎಂಬ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಗ್ರಾಮದ ಹಿರಿಯರಾದ ಹನುಮಂತಪ್ಪ ಪಟ್ನೆ ಮಾತಾನಾಡಿ, ನಮ್ಮ ಊರಿಗೆ ದಾನಮ್ಮ ಬಂದು ದಾಸೋಹ ಕಾರ್ಯ ನಡೆಸಿದ್ದು ಐತಿಹಾಸಿಕ ಸತ್ಯವಾಗಿದೆ. ಅವರು ಉಳಿದುಕೊಂಡಿರುವ ಜಾಗ ಬಾಳೆ ಬನದಿಂದ ಕೂಡಿತ್ತು. ಇದಕ್ಕೆ ಅವರ ಪುರಾಣದಲ್ಲಿ ಕಲ್ಯಾಣ ಕದಳಿ ಎಂದು ಉಲ್ಲೇಖವಾಗಿದೆ ಎಂದರು.

ನೇತೃತ್ವ ವಹಿಸಿದ್ದ ಪೂಜ್ಯ ಲಲಿತಾ ತಾಯಿ, ಮಹೇಶ ಪಾಟೀಲ್, ಸುಭಾಷ ಸಾಯಗಾಂವ ಮಾತನಾಡಿದರು. ಪ್ರೊ.ಶಿವರಾಜ ನೀಲಕಂಠ, ಸಿದ್ದರಾಮಪ್ಪ ಹಂಗರಗಿ, ಮಹಾದೇವಪ್ಪ ತೇಲಿ, ದಾನೇಶ್ವರಿ ಸಂಖ, ಶ್ರೀದೇವಿ ಉಜಳಂಬೆ, ಶಿವಲಿಂಗಪ್ಪ ತಾಂಬೋಳೆ, ಗಿರಿಜಾ ಸಿದ್ದಣ್ಣ, ನಾಗಪ್ಪ ಚಂಡಕಾಪಪುರೆ, ಮಾಣಿಕ್ಯಮ್ಮ, ತುಕ್ಕಪ್ಪ ತಾಂಬೋಳೆ, ಗುರುಪಾದಪ್ಪ ಕರಣೆ, ನಾಗಪ್ಪ ತಾಂಬೋಳೆ, ಸಂತೋಷ ತಾಂಬೋಳೆ, ರಾಜುಕುಮಾರ ಪೂಜಾರಿ, ರವೀಂದ್ರ ರೆಡ್ಡಿ, ನಾರಾಯಣರೆಡ್ಡಿ ಪಾಟೀಲ್, ಶ್ರೀಕಾಂತ ಬಡದಾಳೆ, ಪಂಚಯ್ಯ ಸ್ವಾಮಿ ಇದ್ದರು. ಸುಮಿತ್ರಾ ದಾವಣಗಾವೆ ನಿರೂಪಣೆ ಮಾಡಿದರು. ಸವಿತಾ ಸಜ್ಜನಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net