ಶರಣೆ ದಾನಮ್ಮ ದೇವಿ ಉತ್ಸವಕ್ಕೆ ಸಕಲ ಸಿದ್ಧತೆ

2BK1
 ದಾನಮ್ಮದೇವಿ ಉತ್ಸವ ನಿಮಿತ್ತ ಗುಡ್ಡಾಪುರದಲ್ಲಿ ಶರಣೆ ದಾನಮ್ಮ ದೇವಿ ಜ್ಯೋತಿಗೆ ಚಾಲನೆ ನೀಡಲಾಯಿತು. ಶ್ರೀ ಬಸವಪ್ರಭು ಸ್ವಾಮೀಜಿ, ದಾನಪ್ಪ ಪಟ್ಟಣಶೆಟ್ಟಿ, ಶಿವಕುಮಾರ ದುಗ್ಗಾಣಿ, ಸುಭಾಷ ಸಾಯಗಾಂವ, ತುಕಾರಾಮ ಮಾಳಿ, ಸುರೇಖಾ ಚವ್ಹಾಣ್, ಶ್ರೀದೇವಿ ಉಜಳಂಬೆ, ಸುಮಿತ್ರಾ ದಾವಣಗಾವೆ, ರೇಣುಕಾ ಮಾಮನೆ, ಮಹಾದೇವಪ್ಪ ತೇಲಿ ಇದ್ದರು.
Published on

ಬಸವಕಲ್ಯಾಣ: ಶರಣೆ ದಾನಮ್ಮ ದೇವಿ ತಪೋಕ್ಷೇತ್ರವಾಗಿರುವ ತಾಲೂಕಿನ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಏ.೫ ಮತ್ತು ೬ರಂದು ನಡೆಯಲಿರುವ ದಾನಮ್ಮ ಉತ್ಸವ, ತೃತೀಯ ಶರಣ ಸಮಾಗಮ ಹಾಗೂ ಜ್ಞಾನ ಶಿಬಿರಕ್ಕಾಗಿ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಹೇಳಿದರು.

ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಐದು ಜಿಲ್ಲೆಯಲ್ಲಿ ಪ್ರಚಾರ ಮಾಡಲಾಗಿದ್ದು, ಸಾವಿರಾರು ಭಕ್ತರು ಆಗಮಿಸಲಿದ್ದು, ಅವರಿಗೆ ತಾತ್ಕಾಲಿಕ ಶಾಮಿಯಾನ್ ಟೆಂಟ್ ಹಾಕಿಸಲಾಗುತ್ತಿದೆ. ಜತೆಗೆ ಅನುಭವ ಮಂಟಪ ಹಾಗೂ ಯಾತ್ರೆ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗಾಗಿ ಹೋಳಿಗೆ ತುಪ್ಪ, ಲಾಡು, ಗೋಧಿ ಹುಗ್ಗಿ, ರೊಟ್ಟಿ, ಚಪಾತಿ, ಮೊಸರ ಚಟ್ನೆ, ಮಜ್ಜಿಗೆ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪೂಜ್ಯರು ಮಾಹಿತಿ ನೀಡಿದರು.

ಎರಡು ದಿನದ ಉತ್ಸವದಲ್ಲಿ ಉದ್ಘಾಟನೆ, ಐದು ಶರಣ ಜ್ಞಾನ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ,ಗುರುವಂದನಾ ಹಾಗೂ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ, ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಉತ್ಸವದ ಉದ್ಘಾಟನೆಗಾಗಿ ಗುಡ್ಡಾಪುರದಿಂದ ದಾನಮ್ಮನ ಜ್ಞಾನ ಜ್ಯೋತಿ ಯಾತ್ರೆ ಆಗಮಿಸುತ್ತಿದ್ದು, ಈಗಾಗಲೇ ಸೋಲಾಪುರ, ವಿಜಯಪೂರ, ಸಾಂಗ್ಲಿ, ಕೋಲಾಪೂರ, ಕಲಬುರಗಿ, ಬೀದರ್ ಸೇರಿ ಆರು ಜಿಲ್ಲೆಯಲ್ಲಿ ಎರಡು ತಂಡ ರಚಿಸಿ ಪ್ರಚಾರ ಮಾಡಲಾಗಿದೆ ಎಂದು ತಿಳಿಸಿದರು.

ಏ.೫ರಂದು ಬೆಳಗ್ಗೆ ೫ರಿಂದ ಯೋಗಾಸನ, ೭ ರಿಂದ ೯ರವರೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಹಾಗೂ ವಚನ ಪಠಣ ನೆರವೇರಲಿದೆ. ಬೆಳಗ್ಗೆ ೧೦ಕ್ಕೆ ಪೂಜ್ಯರ ಮತ್ತು ಸರ್ವ ಶರಣರ ಸಮ್ಮುಖದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಲಿದ್ದು, ಸಮಾರಂಭವನ್ನು ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಉದ್ಘಾಟಿಸುವರು. ಸುನಿತಾ ವಿಜಯಕುಮಾರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ತಾಪಂ ಮಾಜಿ ಉಪಾಧ್ಯಕ್ಷ ದಿಲೀಪ ಶಿಂದೆ, ರೇವಣಪ್ಪ ಹೆಗ್ಗಣೆ ಭಾಗವಹಿಸುವರು. ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬರೆದ ಅಕ್ಕನ ಚರಿತಾಮೃತ ಕೃತಿ ಬಿಡುಗಡೆಗೊಳ್ಳಲಿದೆ.

ಗೋಷ್ಠಿಗಳು: ೫ರಂದು ಮಧ್ಯಾಹ್ನ ೩ ರಿಂದ ಎರಡನೇ ಶರಣ ಜ್ಞಾನ ಗೋಷ್ಠಿ ನಡೆಯಲಿದ್ದು, ಸಸ್ತಾಪುರದ ಶ್ರೀ ಸದಾನಂದ ಸ್ವಾಮೀಜಿ ನೇತೃತ್ವ, ಶ್ರೀ ಪ್ರಭುದೇವ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಪ್ರೊ.ಶಿವಶರಣಪ್ಪ ಹುಗ್ಗಿ ಪಾಟೀಲ ಮತ್ತು ಪ್ರೊ.ಶ್ರೀಶೈಲ ಮಸೂತೆ ವಿಶೇಷÀ ಅನುಭಾವ ನೀಡಲಿದ್ದಾರೆ. ಸಂಜೆ ೬ ರಿಂದ ಮೂರನೇ ಶರಣ ಜ್ಞಾನ ಗೋಷ್ಠಿಯಲ್ಲಿ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ಭಾರತಿ ಕೆಂಪಯ್ಯ ವಿಶೇಷ ಅನುಭಾವ ನೀಡಲಿದ್ದಾರೆ. ಲೀಲಾವತಿ ಕರಡಿ, ಮಹಾದೇವಿ ಅಂಕಲಗಿ, ಜಗದೇವಿ ಚೆಟ್ಟಿ, ಸವಿತಾ ಭಂಡಾರ ಕವಟೆ, ಶ್ರೀದೇವಿ ಉಜಳಂಬೆ, ಗಿರಿಜಾ ಸಿದ್ದಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

೬ರಂದು ನಾಲ್ಕನೇ ಶರಣ ಜ್ಞಾನ ಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀ ಸಿದ್ಧರಾಮ ಶರಣರು ಬೆಲ್ದಾಳ ವಹಿಸಲಿದ್ದು, ಪ್ರೋ. ಸಿದ್ದು ಯಾಪಲಪರವಿ, ಶರಣ ಸಾಹಿತಿ ಮಹಾಂತೇಶ ಕುಂಬಾರ, ಬಸವ ತತ್ವ ಚಿಂತಕ ಶಿವಸ್ವಾಮಿ ವಿಶೇಷ ಅನುಭಾವ ನೀಡಲಿದ್ದಾರೆ. ಮಧ್ಯಾಹ್ನ ಐದನೇ ಗೋಷ್ಠಿಯಲ್ಲಿ ಬಸವತತ್ವ ಪ್ರಚಾರಕ್ಕಾಗಿ ಶರಣ ಸೇವಾದಳದ ಉದ್ಘಾಟನೆ ನೆರವೇರಿಸಲಿದ್ದು, ಬೇಲೂರಿನ ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಭಾಲ್ಕಿ ಗುಂಡಪ್ಪ ಸಂಗಮಕರ್, ನಾಗೇಂದ್ರಪ್ಪ ನಿಂಬರ್ಗಿ, ಬಿಎಸ್‌ಎಫ್ ಯೋಧರಾದ ಸಿದ್ದಪ್ಪ ಮುಗನೂರು ಮಾತನಾಡಲಿದ್ದಾರೆ.

ಸಮಾರೋಪ: ೬ರಂದು ಸಂಜೆ ೬ಕ್ಕೆ ೧೪ನೇ ಶರಣೆ ದಾನಮ್ಮ ದೇವಿಯ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಹುಲಸೂರಿನ ಶ್ರೀ ಡಾ. ಶಿವಾನಂದ ಸ್ವಾಮೀಜಿ,ಶ್ರೀ ಕಾಂತ ಸ್ವಾಮೀಜಿ, ನುಲಿಯ ಚಂದಯ್ಯ ಗವಿಯ ಮಾತೆ ಚಿತ್ರಮ್ಮತಾಯಿ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟನೆ ನೆರವೇರಿಸಲಿದ್ದಾರೆ. ಗುರು ಬಸವ ಪೂಜೆಯನ್ನು ಸಂಸದ ಸಾಗರ ಖಂಡ್ರೆ ನೆರವೇರಿಸಲಿದ್ದು, ಶಾಸಕ ಶರಣು ಸಲಗರ ಧ್ವಜಾರೋಹಣ ನೆರವೇರಿಸುವರು. ವಿಶೇಷ ಆಹ್ವಾನಿತರಾಗಿ ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ, ಕರ್ನಾಟಕ ಮೀನಯಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ. ಮಾಜಿ ಎಂಎಲ್ಸಿ ವಿಜಯಸಿಂಗ್, ಮುಖಂಡರಾದ ಧನರಾಜ ತಾಳಂಪಳ್ಳಿ, ಅರ್ಜುನ್ ಕನಕ, ಶಿವರಾಜ ನರಶೆಟ್ಟಿ. ಉದ್ಯಮಿಗಳಾದ ಅಲ್ಲಮಪ್ರಭು ನಾವದಗೆರೆ, ಬಸವರಾಜ ಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು. ನಿವೃತ್ತ ಕೆಎಎಸ್ ಅಧಿಕಾರಿ ಎಸ್.ದಿವಾಕರ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಪ್ರಶಸ್ತಿ ಪ್ರದಾನ: ಈ ವರ್ಷದ ದಾನಮ್ಮದೇವಿ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಕನ್ನಡ-ಮರಾಠಿ ಸಾಹಿತ್ಯದ ಅನುವಾದಕ ಪ್ರೊ.ಶಾಲಿನಿ ದೊಡ್ಡಮನಿ ಅವರಿಗೆ ನೀಡಲಾಗುತ್ತಿದೆ. ಕಲ್ಯಾಣ ರತ್ನ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ, ವೈಚಾರಿಕ ಚಿಂತಕಿ ಮತ್ತು ಗಜಲ್ ಸಾಹಿತಿ ಡಾ.ಜಯದೇವಿ ಗಾಯಕವಾಡ ಅವರಿಗೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net