ಶರಣರು ಸ್ತ್ರೀ ಸಮಾನತೆಯ ಹರಿಕಾರರು

ade68619-0c08-4639-88f9-c741eab0f21a
Published on

ಶರಣರು ಸ್ತ್ರೀ ಸಮಾನತೆಯ ಹರಿಕಾರರು

ಹನ್ನೆರಡನೆಯ ಶತಮಾನದ ಶರಣರು ಸ್ತ್ರೀ ಸಮಾನತೆಯ ಹರಿಕಾರರು. ಸ್ತ್ರೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ ಮೊದಲಿಗರು ಎಂದು ಕನ್ನಡ ಅಧ್ಯಾಪಕ ಡಾ.ಗಜಾನನ ಸೊಗಲನ್ನವರ ಹೇಳಿದರು.

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ನಗರದ ಲಿಂಗಾಯತ ಭವನದಲ್ಲಿ ಯುಗಾದಿ ಅಮವಾಸ್ಯೆ ಹಾಗೂ ಮಹಿಳಾ ದಿನಾಚರಣೆ ನಿಮಿತ್ತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಿದ್ದ ಅನುಭಾವ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಹೆಣ್ಣನ್ನು ಕುರಿತು ಸಮಾಜದಲ್ಲಿ ಇದ್ದ ಕೀಳು ಮನಸ್ಸಸ್ಥಿತಿಯನ್ನು ಮೊದಲ ಬಾರಿ ಪ್ರಶ್ನಿಸಿದವರು ಹನ್ನೆರಡನೆಯ ಶತಮಾನದ ಶರಣರು. ಸ್ತ್ರೀಯರಿಗೆ ಸಮಾಜದ ಎಲ್ಲ ರಂಗಗಳಲ್ಲಿ ಮುಕ್ತವಾದ ಸ್ವತಂತ್ರ್ಯವನ್ನು ಕಲ್ಪಿಸಿ ಅವರ ಬದುಕಿಗೆ ಆಶ್ರಯವಾದರು.

ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಮಹಿಳಾ ಸಾಹಿತಿ ಮಹಾಸಭೆ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ ಗಂಡು ಸಂತಾನ ಹುಟ್ಟಿದರೆ ಸಂಭ್ರಮಿಸುವ ಕಾಲವೊಂದಿತ್ತು. ಇಂದು ಬದಲಾಗಿದೆ. ನಮ್ಮ ಮಹಿಳೆ ಅಂತರಿಕ್ಷವನ್ನು ಪ್ರವೇಶಿಸಿ ಸಾಧನೆ ಮಾಡಿದ್ದಾಳೆ, ಸಮುದ್ರದ ಆಳವನ್ನು ಬಗೆದು ವಿಕ್ರಮ ಸಾಧಿಸಿದ್ದಾಳೆ. ಅವಳು ಸೇವೆಗೈದ ಕ್ಷೇತ್ರಗಳೇ ಇಲ್ಲ. ಇಂದು ಎಲ್ಲ ನೆಲೆಗಳಲ್ಲಿ ನಮ್ಮ ಮಹಿಳೆಯರೇ ಫಸ್ಟ್. ಪುರುಷರ ದಬ್ಬಾಳಿಕೆಯನ್ನು ಮೆಟ್ಟಿ ಅವರು ಮಾಡಿರುವ ಸಾಧನೆಗೆ ಬೆಲೆಕಟ್ಟಲಾಗದು ಎಂದರು.

ಸಾನ್ನಿಧ್ಯವಹಿಸಿಕೊಂಡಿದ್ದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿಯವರು ಮಾತನಾಡಿ, ಸಮಾಜಕ್ಕೆ ಹೆಣ್ಣು ಮತ್ತು ಗಂಡು ಒಂದೇ ನಾಣ್ಯ ಎರಡು ಮುಖಗಳು. ಅವರಲ್ಲಿ ಭೇದವನ್ನು ಕಲ್ಪಿಸುವದರಲ್ಲಿ ಅರ್ಥವಿಲ್ಲದ ಮಾತು. ಸಮಸಮಾಜದ ತಕ್ಕಡಿಗೆ ಇರ್ವರ ಕೊಡುಗೆ ಅನನ್ಯವೆನಿಸಿದೆ. ಇಂದು ಕಾಲಬದಲಾಗಿದೆ. ಜನರ ಮನಸ್ಸುಗಳು ಬದಲಾಗುತ್ತಿವೆ. ಇದು ಇನ್ನೂ ಬದಲಾಗಬೇಕು. ಹಲವಾರು ಧರ್ಮಗಳಲ್ಲಿ ಅವಳಿಗೆ ಸಮಾನತೆಯನ್ನು ನೀಡಿಲ್ಲ ಅಂತಹ ಶೂದ್ರಭಾವಗಳಿಂದ ಹೊರಗೆ ಬರಲೇಬೇಕೆಂದು ನುಡಿದರು.

ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಬಾಲಚಂದ್ರ ಬಾಗಿ, ಆರ್.ಪಿ.ಪಾಟೀಲ, ಸರೋಜನಿ ನಿಶಾನದಾರ, ಎಂ.ವಾಯ್.ಮೆಣಸಿನಕಾಯಿ, ಡಾ.ಕಟ್ಟಿ, ಶಂಕರ ಪಟ್ಟೇದ, ಶಿವಲೀಲಾ ಮೇಲಿಕಟ್ಟಿ, ಡಾ.ಮಹೇಶ ಗುರನಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net