

ಬಸವಕಲ್ಯಾಣ: ಕಂತಿ ಭಿಕ್ಷೆ ಮೂಲಕ ಹಸಿದವರಿಗೆ ಅನ್ನ ನೀಡುವಂತಹ ಮಾದರಿ ಕೆಲಸ ಮಾಡಿದ್ದ ಬಿಬ್ಬಿ ಬಾಚಯ್ಯ ದಾಸೋಹ ತತ್ವದ ಮೌಲ್ಯವನ್ನು ಸಾರಿದ್ದಾರೆ. ಶರಣರು ಸಾರಿದ ಸಂದೇಶಗಳು ಸಾರ್ವಕಾಲಿಕವಾಗಿವೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಹೇಳಿದರು.
ನಗರದ ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಶರಣ ಬಿಬ್ಬಿ ಬಾಚಯ್ಯನವರ ಸ್ಮರಣೋತ್ಸವ- ನಗೆಹಬ್ಬ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅಕ್ಕ, ಭಗವಂತನಿಗೆ ಬೇಕಿರುವುದು ಭಾವಶುದ್ಧಿ. ಹೀಗಾಗಿ ನಮ್ಮೆಲ್ಲರ ತನು-ಮನ-ಭಾವ ಶುದ್ಧವಾಗಿರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಮಾತನಾಡಿ, ಬಸವಾದಿ ಶರಣರು ಸರ್ವರಿಗೂ ಸಮಪಾಲು ಸಮಬಾಳು ಎಂಬ ನೀತಿ ಸಿದ್ಧಾಂತ ನೀಡಿದ್ದಾರೆ. ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಜರುಗಿದ ಸಮಾಜೋಧಾರ್ಮಿಕ, ವೈಚಾರಿಕ ಚಳುವಳಿಗೆ ಮೂಲ ಪ್ರೇರಣೆಯೇ ಶರಣು ಶರಣಾರ್ಥಿ ಎಂಬ ಪದ ಪ್ರಯೋಗ ಎಂದು ವಿಶ್ಲೇಷಿಸಿದರು.
ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ ಸನ್ಮಾನ ಸ್ವೀಕರಿಸಿ ಮಾತನಾಡಿ. ಬಸವಕಲ್ಯಾಣದ ಅನುಭವ ಮಂಟಪದ ಮೂಲಕ ಇಡೀ ಜಗತ್ತಿನಲ್ಲಿಯೇ ಮೊಟ್ಟಮೊದಲು ಸಾರ್ವತ್ರಿಕ ಶಿಕ್ಷಣ ಪದ್ದತಿ ಜಾರಿಗೆ ತಂದವರು ಬಸವಣ್ಣನವರು. ಈ ನಾಡಿನಲ್ಲಿ ಶಿಕ್ಷಣ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತೇನೆ ಎಂದರು.
ಬನಹಟ್ಟಿಯ ನಿವೃತ್ತ ಪ್ರಾಚಾರ್ಯ ಡಾ.ಬಿ.ಆರ್.ಪೊಲೀಸ್ ಪಾಟೀಲ ಮಾತನಾಡಿದರು. ನೇತೃತ್ವ ವಹಿಸಿದ್ದ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ, ನಗರಸಭೆ ಪೌರಾಯುಕ್ತ ರಾಜು ಡಿ. ಬಣಕಾರ ಮಾತನಾಡಿದರು. ಬೀದರ್ ನಗೆ ಯೋಗ ಕೂಟದ ಶಿವರಾಜ ಬುಕ್ಕಾ ನಗು ಎನ್ನುವುದು ಸರ್ವಕಾಯಿಲೆಗೂ ಔಷಧವಿದ್ದಂತೆ ಜೀವನದಲ್ಲಿ ದಿನವೂ ನಡೆಯುವ ಹಾಸ್ಯ ಪ್ರಸಂಗಗಳನ್ನು ಹೇಳಿ ಸಭಿಕರನ್ನು ನಗಿಸಿದರು.
ಬಿಡಿಪಿಸಿ ನಿರ್ದೇಶಕ ಅಶೋಕ ನಾಗರಾಳೆ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ಮಂಠಾಳೆ, ಪ್ರಯಾಗಬಾಯಿ ಮಹಾಜನ, ಸಂಗಮೇಶ ಹಾವಗೀರೆ ಇತರರಿದ್ದರು. ಹರಳಯ್ಯ ಸಮಾಜದ ಉಪಾಧ್ಯಕ್ಷ ಗೌತಮ ಜಾಧವ ಧ್ವಜಾರೋಹಣ ನೆರವೇರಿಸಿದರು. ಸುಧಾರಾಣಿ ಬಿರಾದಾರ ಗುರುಪೂಜೆ ನೆರವೇರಿಸಿದರು. ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರು. ಸಂತೋಷ ಮಡಿವಾಳ ಸ್ವಾಗತಿಸಿದರು. ಕವಿತಾ ರಾಜೋಳೆ ನಿರೂಪಣೆ ಮಾಡಿದರು.ಸಂಗೀತಾ ರಾಜಪ್ಪಾ ಬಿರಾದಾರ ದಾಸೋಹ ವ್ಯವಸ್ಥೆ ಮಾಡಿದ್ದರು.