

ಸರಗೂರು: ತಾಲೂಕು ಹೆಗ್ಗನೂರು ಗ್ರಾಮದಲ್ಲಿ ಸವಿತಾ ಸಮಾಜದ ವತಿಯಿಂದ ಶುಕ್ರವಾರ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಆಚರಿಸಲಾಯಿತು.
ಹಡಪದ ಅಪ್ಪಣ್ಣ ಅವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಹಡಪದ ಅಪ್ಪಣ್ಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಅರ್ಪಿಸಿ ನಮನ ಸಲ್ಲಿಸಲಾಯಿತು.
ಸವಿತಾ ಸಮಾಜದ ಯಜಮಾನ ಉಮೇಶ್ ಮಾತನಾಡಿ, ಬಸವಣ್ಣ ಅವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣ ಪ್ರಮುಖ ಪಾತ್ರ ವಹಿಸಿದ್ದರು. ಅವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ. ಅಪ್ಪಣ್ಣನವರ ಜೀವನ, ತತ್ವ, ಸಿದ್ಧಾಂತಗಳನ್ನು ಎಲ್ಲರಿಗೂ ತಿಳಿಸಲು ಜಯಂತಿಯನ್ನು ಆಚರಿಸಲಾಗುತ್ತಿದೆ. ಶರಣರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಬದುಕು ರೂಪಿಸಿಕೊಳ್ಳಬೇಕು. ಅಪ್ಪಣ್ಣ ಒಬ್ಬ ಸೇವಾಯೋಗಿ, ಕಾಯಕನಿರತ ಶರಣರಾಗಿದ್ದಾರೆ. ಅಂತಹ ಮಹಾನ್ ಶರಣರು ನಡೆದು ಬಂದ ದಾರಿಯಲ್ಲಿ ಸಾಗಿದರೆ ಜೀವನ ಸಾರ್ಥಕವಾಗುತ್ತದೆ. ಅವರ ಸ್ಮರಣೆಗೂ ಅರ್ಥಪೂರ್ಣತೆ ಸಿಗುತ್ತದೆ ಎಂದರು.
ಸಮಾಜದ ಮುಖಂಡರಾದ ವೆಂಕಟೇಶ್, ರಾಜಶೆಟ್ಟಿ, ಕರಿಶೆಟ್ಟಿ, ಚಿಕ್ಕತಮ್ಮಶೆಟ್ಟಿ, ರಂಗಸ್ವಾಮಿ, ರವಿ, ಸುರೇಶ್ .ಕಾಳರಾಜುಶೆಟ್ಟಿ ಚಿಕ್ಕಯಜಮಾನ ನಾಗರಾಜಶೆಟ್ಟಿ, ಗೋವಿಂದರಾಜು, ಕಾಳರಾಜು, ಉಮೇಶ್ , ಕಾಳಪ್ಪ, ಕೃಷ್ಣಶೆಟ್ಟಿ, ವೆಂಕಟೇಶ್, ಹನುಮಂತರಾಜು, ಮಣಿ, ಸುನೀಲ್, ವೆಂಕಟರಮಣ, ಸ್ವಾಮಿ, ಸಂಜಯ್ ಇದ್ದರು.