ಶರಣರ ಸಂದೇಶಗಳು ಇಂದು ಹೆಚ್ಚು ಪ್ರಸ್ತುತ

27 pnh 01a web
Published on

ಪಂಚನಹಳ್ಳಿ: ಶರಣರ ಸಂದೇಶಗಳು ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ್ರು ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಿಂಗಟಗೆರೆಯ ಶ್ರೀಕಲ್ಲೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಶರಣ ಸಂದೇಶ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ನಿಜ ಶರಣನಿಗೆ ಇರಬೇಕಾದ ಮೌಲ್ಯಗಳು ಇಂದು ಯಾರಲ್ಲೂ ಉಳಿದಿಲ್ಲ. ಮೌಲ್ಯಗಳನ್ನು ಮಾರಿ ಮಹಲುಗಳನ್ನು ಕಟ್ಟಬೇಕೆನ್ನುವ ಮನೋಭಾವ ಅಧಿಕವಾಗಿದೆ. ಬರುವುದು ಯಾವ ರೂಪದಲ್ಲಾದರೂ ಬರಲಿ ಎನ್ನುವ ಮನಸ್ಥಿತಿ ಅಪಾಯಕಾರಿ ಎಂದರು.

ಪ್ರಸ್ತುತ ಯಾವುದು ಸತ್ಯ ಮತ್ತು ಮೌಲ್ಯಯುತ ಎಂಬುದನ್ನು ನಿರ್ಧರಿಸುವುದು ಕಷ್ಟವಾಗಿದೆ. ನ್ಯಾಯ ಮತ್ತು ಅನ್ಯಾಯದ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವ ವ್ಯವಧಾನ ಜನರಲ್ಲಿ ಉಳಿದಿಲ್ಲ. ಮಕ್ಕಳಿಗೆ ಆದರ್ಶಗಳನ್ನು ಹೇಳಿಕೊಡಬೇಕಾದ ಪಾಲಕರೇ ಇಂದಿನ ಸಮಾಜದಲ್ಲಿ ಬದುಕಲು ಅಸತ್ಯ, ಅಪ್ರಾಮಾಣಿಕತೆ ಅನಿವಾರ್ಯ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದು ವಿಷಾದನೀಯ. ಒಳ್ಳೆಯ ಗುಣಕ್ಕಿಂತ ಸುಂದರವಾದುದು ಮತ್ತೊಂದಿಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕು. ಹೆಣ್ಣು ತಾಯಿಯಾಗಿ ಕಾಣುವಷ್ಟು ಚೆನ್ನಾಗಿ ಮತ್ಯಾವ ರೂಪದಲ್ಲೂ ಕಾಣಲು ಸಾಧ್ಯವಿಲ್ಲ. ಆದರೆ ಬಹಳಷ್ಟು ಹೆಣ್ಣುಮಕ್ಕಳು ತಾಯ್ತನ ಅನುಭವಿಸುತ್ತಿಲ್ಲ. ತಪ್ಪು ಮಾಡುವ ಮಕ್ಕಳನ್ನು ತಾಯಿ ತಿದ್ದದಿದ್ದರೆ ಜಗತ್ತು ಶ್ರೇಷ್ಠವಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಜಿಪಂ ಮಾಜಿ ಅಧ್ಯಕ್ಷೆ ಕವಿತಾ ಬೆಳ್ಳಿಪ್ರಕಾಶ್ ಮಾತನಾಡಿ, ಮೋಹಕ್ಕೆ ಒಳಗಾಗಿ ಆಗಾಗ ದಾರಿ ತಪ್ಪುವುದನ್ನು ತಡೆಯಲು ಶರಣರ ಸಂದೇಶಗಳು ಸಹಕಾರಿಯಾಗುತ್ತವೆ. ಶರಣರು ನುಡಿದಂತೆ ನಡೆಯುತ್ತಿದ್ದರು ಮತ್ತು ಮರಣವನ್ನು ಮಹಾನವಮಿ ಎಂದು ಕರೆದರು. ದೃಢ ನಿರ್ಧಾರದಿಂದ ಬದುಕಿದರು. ಶರಣರ ಸಂದೇಶಗಳನ್ನು ಉಚ್ಚರಿಸುವ ನಾವು ಅವರ ತತ್ವಾದರ್ಶಗಳಿಗೆ ವಿರುದ್ಧವಾಗಿ ಬದುಕುತ್ತಿರುವುದು ವಿಪರ್ಯಾಸ. ಬದಲಾವಣೆ ವ್ಯಕ್ತಿಗತವಾಗಿ ಆರಂಭವಾದಾಗ ಸಮಾಜ ತಾನಾಗಿಯೇ ಸುಧಾರಿಸುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net