

ಚಾಮರಾಜನಗರ: ಹನ್ನೆರಡನೇ ಶತಮಾನದ ಬಸವಾದಿ ಶರಣರು ಸಾರಿದ ವಚನಗಳ ಸಂದೇಶವನ್ನು ಪಾಲಿಸುವ ಮೂಲಕ ಸಾರ್ಥಕ ಬದುಕನ್ನು ನಮ್ಮದಾಗಿಸಿಕೊಳ್ಳಬೇಕೆಂದು ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಠದಲ್ಲಿ ಶನಿವಾರ ಆಯೋಜಿಸಿದ್ದ ಇಷ್ಟಲಿಂಗ ಪೂಜೆ ಮತ್ತು ಶಿವಕಥೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪಾಲಕರು ಮಕ್ಕಳಿಗೆ ಸನ್ಮಾರ್ಗದ ಹಾದಿ ತೋರಬೇಕು. ವಚನಗಳ ಸಾರವನ್ನು ಅರಿಯುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಶರಣರು ಇಷ್ಟಲಿಂಗದಲ್ಲೇ ಭಗವಂತನನ್ನು ಕಾಣುತ್ತಿದ್ದರು. ಬದುಕಿರುವಾಗಲೇ ಮೋಕ್ಷ ಸಾಧಿಸುವುದು ನಮ್ಮ ಧ್ಯೇಯವಾಗಬೇಕು. ಅದಕ್ಕಾಗಿ ಇಷ್ಟಲಿಂಗ ಪೂಜೆ ಮಾಡಬೇಕು. ತನ್ನನ್ನು ತಾನು ಅರಿಯುವ ಮೂಲಕ ಮತ್ತು ವಚನಗಳಿಂದ ಬದುಕನ್ನು ಹಸನುಗೊಳಿಸಿಕೊಳ್ಳೋಣ ಎಂದು ಹೇಳಿದರು.
ಇದೇ ವೇಳೆ ಭರತಶಾಸಿ ಶಿವಕಥೆ ಹೇಳಿದರು. ನಗರದ ಸಾವಿರಾರು ಮಕ್ಕಳೂ, ಮಹಿಳೆಯರು ಮತ್ತು ಪುರುಷರು ಇಷ್ಟಲಿಂಗ ಪೂಜೆ ನೆರವೇರಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.