

ಹುಬ್ಬಳ್ಳಿ: ಮಹಾತ್ಮರ, ಶರಣರ, ಸಂತರ ಸಂದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿವೇಕ ಜಾಗ್ರತ ಬಳಗದ ಅಧಿಕಾರಿ ಡಾ. ಪಂಕಜಾ ಬ್ಯಾಕೋಡಿ ಹೇಳಿದರು.
ಹುಬ್ಬಳ್ಳಿಯ ವಿವೇಕ ಜಾಗ್ರತ ಬಳಗ ಮತ್ತು ಪದ್ಮಶ್ರೀ ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದ ಬಾಲಕಿಯರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಾತೆ ಶಾರದಾದೇವಿಯವರ 170ನೇ ಜಯಂತ್ಯುತ್ಸವ ಮತ್ತು ಗ್ರಂಥಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯರಿಗೆ ತೋರಿಸುವ ಪ್ರೀತಿ, ವಿಶ್ವಾಸವನ್ನು ಪ್ರಾಣಿ, ಪಕ್ಷಿಗಳಿಗೂ ತೋರಿಸಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಸರಳತೆ ರೂಢಿಸಿಕೊಂಡು, ಗುರಿ ಮುಟ್ಟಲು ನಿರಂತರ ಪ್ರಯತ್ನಿಸಬೇಕು ಎಂದರು.
ಮಹಿಳಾ ವಿದ್ಯಾಪೀಠದ ಉಪಾಧ್ಯಕ್ಷೆ ಕೀರ್ತಿ ತಂಬದ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಜ್ಯೋತಿ ಜಂಗಣ್ಣವರ ಮತ್ತು ಆಡಳಿತಾಧಿಕಾರಿ ಎಸ್. ಜಿ. ಗದಗ ಮಾತನಾಡಿದರು. ಶಿಕ್ಷಕರಾದ ರವೀಂದ್ರ ದೊಡ್ಡಬಸಣ್ಣವರ, ಚನ್ನಬಸಪ್ಪ ಪುಟ್ಟಣ್ಣವರ ಉಪಸ್ಥಿತರಿದ್ದರು. ವಿವೇಕ ಪ್ರಕಾಶನದ ಗ್ರಂಥಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಪ್ರಾಚಾರ್ಯು ಶಾಂತಾ ಕಿಲ್ಲೇದಾರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸರ್ವಮಂಗಳಾ ಕುದುರಿ ಪರಿಚಯಿಸಿದರು. ಎಸ್.ಎಸ್. ಕರಡಿ ಹಾಗೂ ತಂಡ ಪ್ರಾರ್ಥಿಸಿತು. ಸಾಮೂಹಿಕವಾಗಿ ಶ್ರೀ ರಾಮಕೃಷ್ಣ ಸ್ತೋತ್ರವನ್ನು ಪಠಿಸಲಾಯಿತು. ಬಳಗದ ಅಧ್ಯಕ್ಷೆ ವಿಜಯಾ ಪರಡ್ಡಿ ವಂದಿಸಿದರು. ಡಾ.ಬಿ.ಎಸ್. ಮಾಳವಾಡ ನಿರೂಪಿಸಿದರು.